ಪೆನ್ಸಿಲ್ವೇನಿಯಾ ವಿವಿಯಿಂದ 100ಶೇ. ವಿದ್ಯಾರ್ಥಿವೇತನ ಪಡೆದ ಅದೀಬಾ
ಹೊಸ ಸಾಧನೆ ಮಾಡಿದ ಕಾಶ್ಮೀರದ ಯುವತಿ

ಹೊಸದಿಲ್ಲಿ,ಎ.2: ಎಲ್ಲ ಅಡೆತಡೆಗಳ ನಡುವೆಯೂ ಅಮೆರಿಕದಲ್ಲಿ ಎರೋನಾಟಿಕಲ್ ಇಂಜಿನಿಯರಿಂಗ್ ವ್ಯಾಸಂಗದ ತನ್ನ ಕನಸನ್ನು ನನಸಾಗಿಸಿಕೊಂಡಿರುವ ಕಾಶ್ಮೀರಿ ಯುವತಿ ಅದೀಬಾ ತಕ್ ಅಲ್ಲಿಯ ಪೆನ್ಸಿಲ್ವೇನಿಯಾ ವಿವಿಯಿಂದ ಶೇ.100ರಷ್ಟು ವಿದ್ಯಾರ್ಥಿವೇತನಕ್ಕೆ ಪಾತ್ರಳಾಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ.
2016ರಲ್ಲಿ ನಾಲ್ಕು ತಿಂಗಳ ಕಾಲ ಕಾಶ್ಮೀರ ಕಣಿವೆಯು ಅಶಾಂತಿಯಲ್ಲಿ ಬೇಯುತ್ತ ಕರ್ಫ್ಯೂವಿನ ಕರಿನೆರಳಿನಲ್ಲಿದ್ದಾಗ ಶೋಪಿಯಾನ್ ಜಿಲ್ಲೆಯ ನಿವಾಸಿ ಆದೀಬಾ ತನ್ನ ಅಧ್ಯಯನದಲ್ಲಿ ಮುಳುಗಿದ್ದರು. “ಇಂಜಿನಿಯರ್ ಆಗಬೇಕೆಂಬ ಕನಸು ನನ್ನದಾಗಿತ್ತು. ಅದನ್ಯಾಕೆ ಮಾಡುತ್ತೀಯಾ?, ಹೆಣ್ಣುಮಕ್ಕಳಿಗೆ ಅದು ಸೂಕ್ತವಲ್ಲ ಎಂದು ಪ್ರತಿಯೊಬ್ಬರೂ ನನಗೆ ಬುದ್ಧಿ ಹೇಳಿದ್ದರು. ಆದರೆ ನಾನು ಪ್ರಯತ್ನವನ್ನು ಮುಂದುವರಿಸಿದ್ದೆ. ನನ್ನ ಶಿಕ್ಷಕರು ನಿಜಕ್ಕೂ ನೆರವಾಗಿದ್ದಾರೆ. ನಮ್ಮ ಸುತ್ತಲೂ ಏನು ನಡೆಯುತ್ತಿದೆ ಎನ್ನುವುದರ ಪರಿವೆಯೇ ಇಲ್ಲದ ದಿನಗಳೂ ಇದ್ದವು. 2015ರಲ್ಲಿ ಕಾಶ್ಮೀರದಲ್ಲಿ ಅಶಾಂತಿಯಿತ್ತು, ಆದರೆ ನಾವು ವ್ಯಾಸಂಗವನ್ನು ಮುಂದುವರಿಸುವಂತೆ ಶಿಕ್ಷಕರು ನೋಡಿಕೊಂಡಿದ್ದರು” ಎಂದು ಸಂಭ್ರಮದಲ್ಲಿದ್ದ ಅದೀಬಾ ಸುದ್ದಿಸಂಸ್ಥೆಗೆ ತಿಳಿಸಿದರು.
ಚಿಕ್ಕಂದಿನಿಂದಲೂ ಪ್ರತಿಭಾವಂತೆಯಾಗಿದ್ದ ಅದೀಬಾ ಅಮೆರಿಕದ ವಿವಿಯಲ್ಲಿ ಪ್ರವೇಶ ಪಡೆಯಲು ಕಳೆದ ಎರಡು ವರ್ಷಗಳಿಂದಲೂ ಕಠಿಣವಾಗಿ ಶ್ರಮಿಸಿದ್ದರು.
ಮಗಳ ಸಾಧನೆ ಆದೀಬಾರ ಕುಟುಂಬಕ್ಕೆ ಹೆಮ್ಮೆಯನ್ನು ತಂದಿದೆ.
“ಮಕ್ಕಳು ಏನಾಗಬಯಸುತ್ತಾರೋ ಅದಕ್ಕೆ ಅವಕಾಶ ನೀಡಬೇಕು. ಅವಳು ನಮಗೆಲ್ಲ ಹೆಮ್ಮೆಯನ್ನುಂಟು ಮಾಡಿದ್ದಾಳೆ. ನಮಗೆ ತುಂಬ ಸಂತೋಷವಾಗಿದೆ” ಎಂದು ಅದೀಬಾಳ ತಾಯಿ ನುಡಿದರು.
ಅದೀಬಾ ಈ ಸಾಧನೆಯನ್ನು ಮಾಡಿರುವ ಕಣಿವೆಯ ಮೊದಲ ಹುಡುಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.







