ನೀತಿ ಸಂಹಿತೆ ಹೆಸರಿನಲ್ಲಿ ಉಪಟಳ: ಐವನ್ ಡಿ’ಸೋಜಾ
ಚುನಾವಣಾಧಿಕಾರಿಗೆ ದೂರು

ಮೂಡುಬಿದಿರೆ, ಎ. 2: ಚುನಾವಣಾ ನೀತಿ ಸಂಹಿತೆ ಹೆಸರಲ್ಲಿ ರಾಜಕಾರಣಿಗಳಿಗೆ ನೀತಿ ಸಂಹಿತೆಯ ಹೆಸರಲ್ಲಿ ವಿನಾ ಕಾರಣ ಉಪಟಳ ನೀಡಲಾಗುತ್ತಿದ್ದು, ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗಳಿಗೆ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ದೂರು ನೀಡಿದ್ದಾರೆ.
ಮೂಡುಬಿದಿರೆ ಹಲವೆಡೆ ಸರ್ಕಾರದ ಅನುದಾನದಿಂದ ನಿರ್ಮಿತವಾದ ರಿಕ್ಷಾ ನಿಲ್ದಾಣಗಳಿಗೆ ಹಾಕಲಾಗಿದ್ದ ನಾಮಪಲಕ ವನ್ನು ಚುನಾವಣಾ ನೀತಿ ಸಂಹಿತೆಯ ಹೆಸರಲ್ಲಿ ಕಿತ್ತು ತೆಗೆದಿರುವುದು ಮತ್ತು ನೀತಿ ಸಂಹಿತೆಯ ಹೆಸರಲ್ಲಿ ರಾಜಕಾರಣಿಗಳಿಗೆ ಹಿಂಸೆ ನೀಡುವುದರ ವಿರುದ್ಧ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಐವನ್, ನೀತಿ ಸಂಹಿತೆಯನ್ವಯ ಬೋರ್ಡ್‌ನಲ್ಲಿನ ರಾಜಕಾರಣಿಗಳ ಚಿತ್ರಕ್ಕೆ ಸ್ಟಿಕ್ಕರ್ ಅಂಟಿಸಬೇಕು. ಅದರೆ ಇಲ್ಲಿ ಇಡೀ ನಾಮಫಲಕವನ್ನೇ ಕಿತ್ತೆಸೆಯಲಾಗಿದೆ. ರಾಜಕೀಯ ವ್ಯಕ್ತಿಗಳು ತಮ್ಮ ಸಾದನೆಗಳನ್ನೇ ತೋರಿಸಿ ಮತ ಕೇಳಬೇಕಾಗುತ್ತದೆ. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ರಾಜಕೀಯ ವ್ಯಕ್ತಿಗಳನ್ನು ಆಹ್ವಾನಿಸದಿರುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಸಿದ್ದಾರೆ. ನಾವೇನು ತುರ್ತು ಪರಿಸ್ಥಿತಿಯ ಕಾಲದಲ್ಲಿಲ್ಲ. ನೀತಿ ಸಂಹಿತೆಯನ್ನು ತಪ್ಪಾಗಿ ಅರ್ಥೈಸಿ ರಾಜಕೀಯ ವ್ಯಕ್ತಿಗಳಿಗೆ ತೊಂದರೆ ನೀಡಬಾರದು. ಸಮಾಜಕ್ಕೆ ರಾಜಕಾರಣಿಗಳೇ ಮುಖ್ಯ ಎಂದರು.





