ದಾವಣಗೆರೆ: ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮ

ದಾವಣಗೆರೆ,ಎ.02: ನಿವೃತ್ತ ಪೊಲೀಸ್ ಸಿಬ್ಬಂದಿಗೆ ಆರೋಗ್ಯ ಭಾಗ್ಯ ಯೋಜನೆ ಜಾರಿಯಾಗಬೇಕು ಹಾಗೂ ನಿವೃತ್ತ ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಉದ್ಯೋಗ ಸಿಗುವಂತೆ ಸೇವೆಯಲ್ಲಿರುವ ಸಿಬ್ಬಂದಿ ಸಹಕಾರ ಮಾಡಬೇಕು ಎಂದು ಪೂರ್ವ ವಲಯದ ಐಜಿಪಿ ಕೆ.ವಿ. ಶರತ್‍ಚಂದ್ರ ಹೇಳಿದರು.
ಇಲ್ಲಿನ ಜಿಲ್ಲಾ ಪೋಲಿಸ್ ಕವಾಯತು ಮೈದಾನದಲ್ಲಿ ಸೋಮವಾರ ಜಿಲ್ಲಾ ಪೋಲಿಸ್ ವತಿಯಿಂದ ನಡೆದ 'ಪೋಲಿಸ್ ಧ್ವಜ' ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೊಲೀಸರ ಕೆಲಸ ಸುಲಭದ ಕೆಲಸ ಎಂದು ಹಲವರು ಅಂದುಕೊಂಡಿರುತ್ತಾರೆ. ಆದರೆ, ನಿಜವಾಗಿಯು ಪೋಲಿಸರ ಕೆಲಸ ಸುಲಭವಲ್ಲ. ಅವರಿಗೆ ಸಾಕಷ್ಟು ಜವಾಬ್ದಾರಿಗಳಿರುತ್ತವೆ. ಕೇಸ್ ಡೈರಿ ಹಾಗೂ ಚಾರ್ಚ್‍ಶಿಟ್ ಸರಿಯಾಗಿ ಹೊಂದಿಸದಿದ್ದರೆ ಅಪರಾಧಿಗಳಿಗೆ ಆಗುವ ಶಿಕ್ಷೆ ತಪ್ಪುತ್ತದೆ. ಇಂತಹ ಜವಾಬ್ದಾರಿಯುತ ಕೆಲಸ ಮಾಡುವುದು ಸುಲಭದ ಕೆಲಸವಲ್ಲ ಎಂದ ಅವರು, ಪೊಲೀಸ್ ಅಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ಕಾರ್ಯನಿರ್ವಹಿಸದೆ, ಗೌರಯುತವಾಗಿ ಸಮಾಜದ ಎದುರು ಜೀವಿಸುತ್ತಿದ್ದಾರೆ. ಹಲವಾರು ಪೊಲೀಸ್ ಅಧಿಕಾರಿಗಳು ಪರಿಸರಕ್ಕೆ ಪ್ರಾಮುಖ್ಯತೆ ನೀಡುವ ಸಲುವಾಗಿ ಹಲವಾರು ಗಿಡಗಳನ್ನು ನೆಟ್ಟಿದ್ದಾರೆ ಎಂದು ಹೇಳಿದರು.
ನಿವೃತ್ತ ಅಧಿಕಾರಿಗಳಿಗೆ ಗೌರವವನ್ನು ಎಲ್ಲರೂ ಸೂಚಿಸಬೇಕು. ಇಲಾಖೆಯಿಂದ ಏನನ್ನು ಮಾಡಲು ಸಾಧ್ಯವೊ ಅದೆಲ್ಲವನ್ನು ಮಾಡಿ ಕೊಡಲು ಅಧಿಕಾರಗಳು ಶ್ರಮಿಸಬೇಕು. ಕಛೇರಿಗೆ ನಿವೃತ್ತರು ಭೇಟಿ ಕೊಟ್ಟಾಗ ಅವರಿಗೆ ಗೌರವ ಪೂರ್ವಕವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪೊಲೀಸ್ ಹಾಗೂ ಸಾರ್ವಜನಿಕರ ನಡುವಿನ ಸಂಬಂಧ ಉತ್ತಮವಾಗಿದ್ದಾಗ ಸ್ವಸ್ಥ ಸಮಾಜ ನಿರ್ಮಾಣವಾಗುವುದು. ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪೊಲೀಸ್ ಹಾಗೂ ಸಾರ್ವಜನಿಕರ ಸಂಬಂಧ ಸರಿಯಾಗಿದ್ದರೆ ಉತ್ತಮ ಸ್ವಸ್ಥ ಸಮಾಜ ನಿರ್ಮಾಣವಾಗುವುದು. ಪೊಲೀಸ್ ಅಧಿಕಾರಿಗಳು ನಿಷ್ಠೆಯಿಂದ ಸದಾ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕೆ ನಿರತರಾಗುವಲ್ಲಿ ಸಾರ್ವಜನಿಕರ ಪಾತ್ರ ಮುಖ್ಯವಾಗುತ್ತದೆ ಎಂದು ಹೇಳಿದರು.
ಭಾರತದಲ್ಲಿ ಮೊದಲು ಪೋಲಿಸ್ ಧ್ವಜ ದಿನಾಚರಣೆ ಮಾಡಿದ್ದು 1965 ಏ.2 ರಂದು ಎಂದು ಹೇಳಿದ ಅವರು, ಧ್ವಜ ಮಾರಾಟದಿಂದ ಬಂದಂತಹ ಶೇ.50ರಷ್ಟು ಹಣವನ್ನು ನಿವೃತ್ತ ಪೋಲಿಸ್ ಅಧಿಕಾರಿಗಳ ಕಲ್ಯಾಣ ನಿಧಿಯಾಗಿ, ಶೇ.20ರಷ್ಟು ಹಣವನ್ನು ಈ ಘಟಕದ ಕಾರ್ಯನಿರತ ಪೋಲಿಸ್ ಕಲ್ಯಾಣನಿಧಿಗೆ, ಹಾಗೂ ಉಳಿದ ಶೇ.30ರಷ್ಟು ಹಣ ಕೇಂದ್ರ ಪೋಲಿಸ್ ಕಲ್ಯಾನ ನಿಧಿಗೆ ಸೇರಲಿದೆ. ಪೋಲಿಸ್ ಇಲಾಖೆಯಿಂದ ನಿವೃತ್ತ ಹೊಂದಿದ ಪೋಲಿಸ್ ಅಧಿಕಾರಿಗಳ ಆರೋಗ್ಯ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಈ ಹಣ ಸಲ್ಲಲಿದೆ ಎಂದು ತಿಳಿಸಿದ ಅವರು ಪೋಲಿಸ್ ಕಲ್ಯಾಣ ನಿಧಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.
ನಿವೃತ್ತ ಸಹಾಯಕ ಪೋಲಿಸ್ ಉಪನಿರೀಕ್ಷಕ ರಾಮನಾಯ್ಕ ಮಾತನಾಡಿ, ರೆಡ್ ಡ್ರೆಸ್‍ನಲ್ಲಿ ಬಲಗೈ ಮುಂದೆ ಹೇಗೆ ಹೋಗುತ್ತದೆ. ಹಾಗೆಯೇ ನಿವೃತ್ತ ಪೊಲೀಸ್ ಅಧಿಕಾರಿಗಳು ತಮ್ಮ ವೃತ್ತಿ ಜೀವನದಲ್ಲಿ ಹಲವಾರಿ ಏಳು ಬೀಳುಗಳನ್ನು ಕಂಡು ಸಮಾಜದ ಹಿತಕ್ಕಾಗಿ ಶ್ರಮಿಸಿರುವವರು ಎಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ಯುವ ಪೊಲೀಸ್ ಅಧಿಕಾರಿಗಳು ಕೆಲವು ವಿಷಯಗಳಲ್ಲಿ ಗರ್ವ ಬಂದಿರುವ ರೀತಿಯಲ್ಲಿ ವರ್ತಿಸುತ್ತಾರೆ. ಆದರೆ, ಶಿಸ್ತನ್ನು ಹಾಗೂ ಸಮಯ ಪಾಲನೆ ಮೊದಲು ಮಾಡುವುದನ್ನು ಕಲಿಯಬೇಕು. ಸಮಾಜದ ಜನರು, ನಿಮ್ಮನ್ನು ನೋಡುತ್ತಾರೆ ಅವರ ಎದುರು ಅಸಭ್ಯ ವರ್ತನೆ ಮಾಡುವುದು ಉತ್ತಮ ವಾತಾವರಣ ನಿರ್ಮಿಸದು ಎಂದು ಹೇಳಿದರು.
ಇದೇ ಸಂದರ್ಭ ನಿವೃತ್ತ ಪೋಲಿಸ್ ಅಧಿಕಾರಿಗಳಾದ ಹಾಲಪ್ಪ, ವಾಸುದೇವ, ಪಾರ್ವತಿ, ಹೆಚ್.ಕೆ. ರೇವಣ್ಣ, ಸಿದ್ದವೀರಯ್ಯ, ಗುರುಲಿಂಗಯ್ಯ, ಎಸ್.ಟಿ.ಪಿ.ಎನ್ ಶಾಸ್ತ್ರೀ, ರಾಜಶೇಖರ್, ನಾಗರಾಜ ಕರೋರೆ, ಎಂ. ಖಾಸೀಮ್ ಮತ್ತಿತರರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.







