ದಾವಣಗೆರೆ: ನೂರಾರು ವಿಕಲಚೇತನರಿಂದ ಮತದಾನ ಜಾಗೃತಿ ಕಾರ್ಯಕ್ರಮ

ದಾವಣಗೆರೆ,ಎ.02: ಪ್ರತಿಯೊಬ್ಬರ ಮತ ದೇಶಕ್ಕೆ ಹಿತ, ವಿಕಲಚೇತನರ ಮತದಾನ ಶೇ. ನೂರರಷ್ಟಾಗಲಿ, ಪ್ರತಿ ಮತ ಅಮೂಲ್ಯ ಎಂಬ ಘೋಷಣಾ ಪತ್ರಗಳನ್ನಡಿದು ನೂರಾರು ವಿಕಲಚೇತನರು ತ್ರಿಚಕ್ರ ಸ್ಕೂಟರ್ ಗಳ ಮೂಲಕ ನಗರಾದ್ಯಂತ ಮತದಾನದ ಜಾಗೃತಿ ಮೂಡಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಂಭಾಗ ಸ್ವೀಪ್ ಕಾರ್ಯಕ್ರಮದಡಿ ಏರ್ಪಡಿಸಲಾಗಿದ್ದ ಜಾಥಾಕ್ಕೆ ಜಿ.ಪಂ ಕಾರ್ಯನಿರ್ವಾಹಣಾಧಿಕಾರಿ ಎಸ್. ಅಶ್ವತಿ ಚಾಲನೆ ನೀಡಿ ಮಾತನಾಡಿದರು.
ಪ್ರತಿ ಮತವೂ ಅಮೂಲ್ಯವಾಗಿದ್ದು ಒಂದೇ ಒಂದು ಮತ ವ್ಯರ್ಥವಾಗದೇ ಶೇ. ನೂರರಷ್ಟು ಮತದಾನ ಜಿಲ್ಲೆಯಾಗಬೇಕು. ಜಿಲ್ಲೆಯಲ್ಲಿ 17 ಸಾವಿರ ವಿಕಲಚೇತನ ಮತದಾರರಿದ್ದು, ಅವರಿಗೆ ಮತದಾನ ಮಾಡಲು ಅವಶ್ಯವಿರುವ ಎಲ್ಲಾ ಸಿದ್ಧತೆ ಮಾಡಲಾಗುತ್ತಿದೆ. ಪ್ರತಿ ಮತಗಟ್ಟೆಯಲ್ಲಿಯೂ ರ್ಯಾಂಪ್ ವ್ಯವಸ್ಥೆ, ಬ್ರೈಲ್ ಫೆಸಿಲಿಟಿ ವ್ಯವಸ್ಥೆ ಹಾಗೂ ವಿಕಲಚೇತನ ಮತದಾರರಿಗೆ ಸಹಾಯವಾಗುವಂತೆ ಒಬ್ಬೊಬ್ಬ ನೋಡಲ್ ಅಧಿಕಾರಿಯನ್ನು ಪ್ರತಿ ಮತಗಟ್ಟೆಗೆ ನೇಮಿಸಲಾಗಿದೆ. ಇವೆಲ್ಲವುಗಳ ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬ ವಿಕಲಚೇತನ ಮತದಾರರೂ ಉತ್ಸಾಹದಿಂದ ಮತ ಚಲಾಯಿಸಬೇಕೆಂದರು.
ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ವಿಕಲಚೇತನರ ಜಾಥಾ ಗುಂಡಿ ಸರ್ಕಲ್, ವಿದ್ಯಾರ್ಥಿ ಭವನ, ಜಯದೇವ ವೃತ್ತ, ಕಾರ್ಪೋರೇಷನ್ ಸರ್ಕಲ್, ಅರುಣ ಚಿತ್ರಮಂದಿರ, ಬಿ.ಎಸ್.ಎನ್.ಎಲ್ ಕಚೇರಿ, ಜಿಲ್ಲಾಡಳಿತ ಭವನದ ಮೂಲಕ ಸಾಗಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್ ಹಾಗೂ ಸಿಬ್ಬಂದಿ ಇದ್ದರು.





