ಮಂಡ್ಯ: ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ವಿವಿಪ್ಯಾಟ್, ಮತಯಂತ್ರದ ಬಗ್ಗೆ ಜಾಗೃತಿ; ಜಿಲ್ಲಾಧಿಕಾರಿ ಎನ್.ಮಂಜುಶ್ರೀ

ಮಂಡ್ಯ, ಎ.2: ಪ್ರತಿಯೊಂದು ಮತಗಟ್ಟೆ ವ್ಯಾಪ್ತಿಯಲ್ಲಿ ವಿವಿಪ್ಯಾಟ್ ಹಾಗೂ ವಿದ್ಯುನ್ಮಾನ ಮತಯಂತ್ರದ ಬಗ್ಗೆ ಮತದಾರರಿಗೆ ಜಾಗೃತಿ ಮೂಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ತಮ್ಮ ಕಚೇರಿ ಸಭಾಂಗಣದಲ್ಲಿ ವಿವಿ ಪ್ಯಾಟ್ ಹಾಗೂ ವಿದ್ಯುನ್ಮಾನ ಮತಯಂತ್ರದ ಕಾರ್ಯ ನಿರ್ವಹಣೆ ಕುರಿತಂತೆ ಮಾಧ್ಯಮ ಪ್ರತಿನಿಧಿಗಳಿಗೆ ಸೋಮವಾರ ಏರ್ಪಡಿಸಿದ್ದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಚುನಾವಣೆ ನಡೆಸಲು ತೀರ್ಮಾನಿಸಿದ್ದು, ಇದುವರೆಗೆ ಕೇವಲ ವಿದ್ಯುತ್ ವಿದ್ಯುನ್ಮಾನ ಮತಯಂತ್ರ ಮಾತ್ರ ಬಳಕೆಯಾಗುತ್ತಿತ್ತು. ಈ ಬಾರಿಯಿಂದ ಯಾವ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದು ಮತದಾರ ತಿಳಿದುಕೊಳ್ಳಲು ವಿವಿ ಪ್ಯಾಟ್ ಯಂತ್ರವನ್ನು ಬಳಕೆ ಮಾಡಲಾಗುವುದು ಎಂದರು.
ಮತದಾನ ಮುಗಿದ ನಂತರ ಈ ಯಂತ್ರಗಳನ್ನು ಅಧಿಕಾರಿಗಳು ಮುದ್ರೆ (ಸೀಲ್ಡ್) ಮಾಡಿ ಮತ ಎಣಿಕೆಯ ದಿನದಂದು ತೆರೆದು ಎಣಿಕೆ ಮಾಡಲಾಗುವುದು. ಅಭ್ಯರ್ಥಿಗಳು ಬಯಸಿದರೆ ಒಂದು ವಿವಿಪ್ಯಾಟ್ ಯಂತ್ರ ತೆರೆದು ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಹಾಕಿರುವ ಮತಗಳನ್ನು ಪರಿಶೀಲನೆ ಮಾಡಬಹುದು ಎಂದು ಅವರು ವಿವರಿಸಿದರು.
ಪ್ರತಿಯೊಂದು ಮತಗಟ್ಟೆ ವ್ಯಾಪ್ತಿಯಲ್ಲಿಯೂ ಮತಗಟ್ಟೆಯ ಸಿಬ್ಬಂದಿಗಳು ಅಂಗವಿಕಲರು ಮತ್ತು ಅಂಧರಿಗೆ ಸಹಾಯ ಮಾಡುತ್ತಾರೆ. ಮತ ಯಂತ್ರದಲ್ಲಿರುವ ಅಭ್ಯರ್ಥಿಗಳು, ಕ್ರಮಸಂಖ್ಯೆ ಓದಿ ತಿಳಿಸುವ ಮೂಲಕ ಮತ ಹಾಕಲು ಸಹಾಯ ಮಾಡುತ್ತಾರೆ ಎಂದು ತಿಳಿಸಿದರು.
ಭಾರತ್ ಎಲೆಕ್ಟ್ರಾನಿಕ್ಸ್ ನ ಎಂಜಿನಿಯರ್ ಕಾರ್ತಿಕ್ ವಿವಿ ಪ್ಯಾಟ್ ಹಾಗೂ ವಿದ್ಯುನ್ಮಾನ ಮತಯಂತ್ರದ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಅಪರ ಜಿಲ್ಲಾಧಿಕಾರಿ ವಿಜಯ್, ಜಿಪಂ ಸಿಇಒ ಬಿ.ಶರತ್ ಉಪಸ್ಥಿತರಿದ್ದರು.







