ಜಿಬ್ರಾಲ್ಟರ್ ಜಲಸಂಧಿಯಲ್ಲಿ ದೋಣಿ ಮಗುಚಿ 4 ವಲಸಿಗರ ಸಾವು: ಹಲವಾರು ಮಂದಿ ನಾಪತ್ತೆ

ಮ್ಯಾಡ್ರಿಡ್ (ಸ್ಪೇನ್), ಎ. 2: ದೋಣಿಯೊಂದರಲ್ಲಿ ಸಮುದ್ರ ದಾಟುತ್ತಿದ್ದ ವಲಸಿಗರ ಪೈಕಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಹಾಗೂ ಉಳಿದವರು ನಾಪತ್ತೆಯಾಗಿದ್ದಾರೆ ಎಂದು ರಕ್ಷಣಾ ಕಾರ್ಯಕರ್ತರು ಹೇಳಿದ್ದಾರೆ.
ದಕ್ಷಿಣ ಸ್ಪೇನ್ ಮತ್ತು ಮೊರೊಕ್ಕೊ ನಡುವಿನ ಜಿಬ್ರಾಲ್ಟರ್ ಜಲಸಂಧಿಯಲ್ಲಿ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ.
ಬದುಕುಳಿದ ಓರ್ವ ವಲಸಿಗನನ್ನು ರಕ್ಷಣಾ ಕಾರ್ಯಕರ್ತರು ಪತ್ತೆಹಚ್ಚಿದ್ದಾರೆ.
ಸೋಮವಾರ ಮುಂಜಾನೆ ದೋಣಿಯಲ್ಲಿ 12 ಮಂದಿ ಮೊರೊಕ್ಕೊದ ಟ್ಯಾಂಜಿಯರ್ಸ್‌ನಿಂದ ಹೊರಟಿದ್ದರು ಎಂಬುದಾಗಿ ಬದುಕುಳಿದ ವ್ಯಕ್ತಿ ಹೇಳಿದ್ದಾರೆ.
‘‘ದೋಣಿಯು ಮಗುಚಿದಾಗ, ಜಲಸಂಧಿಯನ್ನು ದಾಟುತ್ತಿದ್ದ 12 ಮಂದಿಯ ಪೈಕಿ ಮೂವರು ಮಾತ್ರ ದೋಣಿಯಲ್ಲಿ ಉಳಿದರು. ಆ ಪೈಕಿ ಓರ್ವ ಮಾತ್ರ ಬದುಕುಳಿದಿದ್ದು, ಇಬ್ಬರು ಮೃತಪಟ್ಟಿದ್ದರು’’ ಎಂದು ರಕ್ಷಣಾ ಕಾರ್ಯಕರ್ತರ ವಕ್ತಾರರೊಬ್ಬರು ತಿಳಿಸಿದರು. ಅವರ ಸಾವಿಗೆ ಕಾರಣ ತಕ್ಷಣಕ್ಕೆ ತಿಳಿದಿಲ್ಲ.
ವಲಸಿಗರು ಯಾವ ದೇಶಕ್ಕೆ ಸೇರಿದವರು ಎನ್ನುವುದೂ ತಕ್ಷಣಕ್ಕೆ ತಿಳಿದುಬಂದಿಲ್ಲ. ಜಿಬ್ರಾಲ್ಟರ್ ಜಲಸಂಧಿಯಲ್ಲಿ ಕೆಟ್ಟ ಹವಾಮಾನವಿರುತ್ತದೆ ಹಾಗೂ ಬಲವಾದ ಗಾಳಿ ಬೀಸುತ್ತದೆ ಎಂಬುದಾಗಿ ಅಂಡಲುಸಿಯದ ತುರ್ತು ಸೇವೆಗಳ ಘಟಕ ಇದಕ್ಕೂ ಮೊದಲು ಎಚ್ಚರಿಸಿತ್ತು.







