ಯುಬಿ ಷೇರು ಮಾರಾಟಕ್ಕೆ ಅನುಮತಿ ಕೋರಿ ಕಂಪೆನಿ ಪರ ವಕೀಲರಿಂದ ಹೈಕೋರ್ಟ್‌ಗೆ ಮನವಿ

ಬೆಂಗಳೂರು, ಎ.3: ಜಾರಿ ನಿರ್ದೇಶನಾಲಯದ ವಶದಲ್ಲಿರುವ ಯುನೈಟೆಡ್ ಬ್ರೆವರೀಸ್ ಹೋಲ್ಡಿಂಗ್ ಲಿಮಿಟೆಡ್(ಯುಬಿಎಚ್‌ಎಲ್) ಕಂಪೆನಿಯ ಸುಮಾರು 7,500 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಲು ಅನುಮತಿ ನೀಡುವಂತೆ ಕಂಪೆನಿ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದರು.
ಕಿಂಗ್‌ಫಿಷರ್ ವಿಮಾನಯಾನ ಸಂಸ್ಥೆಯು 14 ಬ್ಯಾಂಕುಗಳಿಗೆ ನೀಡಬೇಕಾಗಿರುವ ಕೋಟ್ಯಂತರ ರೂಪಾಯಿ ಮೊತ್ತದ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಯುಬಿಎಚ್‌ಎಲ್ ಸಲ್ಲಿಸಿರುವ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಈ ವೇಳೆ ಕಂಪೆನಿಯ ಮನವಿ ಆಲಿಸಿದ ನ್ಯಾಯಪೀಠ, ಒಟ್ಟು ಷೇರು ಹಾಗೂ ಆಸ್ತಿ ವಿವರಗಳ ಬಗ್ಗೆ ಮೌಲ್ಯಮಾಪನ ವರದಿ ಸಲ್ಲಿಸಿ ಎಂದು ಯುಬಿಎಚ್‌ಎಲ್‌ಗೆ ನಿರ್ದೇಶಿಸಿತು. ಕಂಪೆನಿ ಪರ ಹಾಜರಿದ್ದ ಹಿರಿಯ ವಕೀಲ ಸಜನ್ ಪೂವಯ್ಯ, ಜಾರಿ ನಿರ್ದೇಶನಾಲಯದ (ಇ.ಡಿ) ವಶದಲ್ಲಿರುವ ಷೇರುಗಳನ್ನು ಮಾರಿ ಸಾಲ ತೀರಿಸಲು ಕಂಪೆನಿ ಉದ್ದೇಶಿಸಿದೆ. ಇದಕ್ಕೆ ಕೋರ್ಟ್ ಅನುಮತಿ ಬೇಕು. ಈ ಕುರಿತಂತೆ ಮಧ್ಯಂತರ ಅರ್ಜಿ ಸಲ್ಲಿಸಲಾಗುವುದು ಎಂದರು.
ಕಂಪೆನಿಯ ಷೇರುಗಳ ಮೌಲ್ಯ ಸುಮಾರು 7,500 ಕೋಟಿ ಇದೆ. ಇವುಗಳನ್ನು ಮಾರಿದರೆ ಬರುವ ಹಣದಲ್ಲಿ ಸುಮಾರು 6 ಸಾವಿರ ಕೋಟಿ ಸಾಲ ಹಾಗೂ ಅದರ ಮೇಲಿನ ಬಡ್ಡಿಯನ್ನೂ ಮರುಪಾವತಿ ಮಾಡಬಹುದು. ಹೈಕೋರ್ಟ್‌ನಲ್ಲಿ ಈಗಾಗಲೇ 1,280 ಕೋಟಿ ಠೇವಣಿ ಇರಿಸಲಾಗಿದೆ ಎಂದು ತಿಳಿಸಿದರು.
ಬ್ಯಾಂಕುಗಳ ಪರ ಹಾಜರಿದ್ದ ಹಿರಿಯ ವಕೀಲ ಎಸ್.ಎಸ್.ನಾಗಾನಂದ, ಸಾಲದ ಬಾಕಿ ಮತ್ತು ಬಡ್ಡಿ ಸೇರಿದರೆ ಅಂದಾಜು 10 ಸಾವಿರ ಕೋಟಿ ಆಗುತ್ತದೆ. ಈಗಾಗಲೇ ಕಂಪೆನಿಯನ್ನು ಮುಚ್ಚುವಂತೆ ಕೋರ್ಟ್ ಅಧಿಕೃತ ಪರಿಸಮಾಪಕರನ್ನು ನೇಮಕ ಮಾಡಿದ್ದರೂ ಬ್ಯಾಂಕುಗಳಿಗೆ ಬರಬೇಕಾದ ಸಾಲದಲ್ಲಿ ಒಂದು ನಯಾಪೈಸೆಯೂ ಬಂದಿಲ್ಲ ಎಂದು ಆಕ್ಷೇಪಿಸಿದರು. ವಿವರವಾದ ವಾದ ಪ್ರತಿವಾದ ಆಲಿಸುವುದಾಗಿ ತಿಳಿಸಿದ ನ್ಯಾಯಪೀಠ ವಿಚಾರಣೆಯನ್ನು ಎ.17ಕ್ಕೆ ಮುಂದೂಡಿದೆ.







