ಕರಾವಳಿ ಮತದಾರರ ಜಾಗೃತಿಗಾಗಿ ರಕ್ತದಾನ ಶಿಬಿರ,ಜಲಥಾನ್, ಬಹುಭಾಷಾ ಕವಿಗೋಷ್ಠಿ,ಸಂಚಾರಿ ಪ್ರಚಾರ ಕಾರ್ಯಕ್ರಮ

ಮಂಗಳೂರು,ಎ,3: ದಕ್ಷಿಣ ಕನ್ನಡ ಜಿಲ್ಲಾ ಮತದಾರರ ಜಾಗೃತಿ ಸಮಿತಿಯ (ಸ್ವೀಪ್) ವತಿಯಿಂದ ಕರಾವಳಿಯ ಮತದಾರರಲ್ಲಿ ಜಾಗೃತಿ ಮೂಡಿಸಲು ಈ ಬಾರಿ ರಕ್ತದಾನ ಶಿಬಿರ,ಜಲಥಾನ್,ಸಂಚಾರಿ ವಾಹನ ಪ್ರಚಾರ ಜಾಥವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಾ.3,ರಕ್ತದಾನ : ‘ಜೀವ ಉಳಿಸಲು ರಕ್ತದಾನ ದೇಶ ಉಳಿಸಲು ಮತದಾನ’ಎಂಬ ಘೋಷಣೆಯೊಂದಿಗೆ ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಇದರೊಂದಿಗೆ ಮತದಾರರ ಜಾಗೃತಿ ನಡೆಯಲಿದೆ ಎಂದು ಡಾ.ರವಿ ತಿಳಿಸಿದ್ದಾರೆ.
ಮಾ.8 ,ಜಲಥಾನ್: ಬೊಕ್ಕಪಟ್ಣ ಕಲ್ಲುರ್ಟಿ ದೈವಸ್ಥಾನ ಬಳಿಯ ನದಿ ಕಿನಾರೆಯಲ್ಲಿ ಸ್ಥಳೀಯರ ಸಹಕಾರದೊಂದಿಗೆ 2 ಫೆರಿ ಹಾಗೂ ಎರಡು ಯಾಂತ್ರಿಕೃತ ದೋಣಿಯ ಮೂಲಕ ಸುಲ್ತಾನ್ ಬತ್ತೇರಿ ವರೆಗೆ ಫಲ್ಗುಣಿ ನದಿಯ ತೀರದಲ್ಲಿ 2 ಕಿ.ಮೀ ಜಲಥಾನ್ ಮೂಲಕ ಕರಾವಳಿಯ ಮೀನುಗಾರರಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಸುಲ್ತಾನ್ ಬತ್ತೇರಿಯಲ್ಲಿ ಸಾರ್ವಜನಿಕ ಮತದಾರರ ಜಾಗೃತಿ ಕಾರ್ಯಕ್ರಮ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಎಂ.ಆರ್.ರವಿ ತಿಳಿಸಿದ್ದಾರೆ.
ಮಾ,5ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ಪುರಭವನದಲ್ಲಿ ದ.ಕ ಕನ್ನಡ ಸಾಹಿತ್ಯ ಪರಿಷತ್‌ನ ಸಹಯೋಗದೊಂದಿಗೆ ಮತಚಲಾವಣೆಗೆ ಸಂಬಂಧಿಸಿದ ವಿಷಯದ ಬಗ್ಗೆ ಬಹುಭಾಷಾ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಎಂ.ಆರ್.ರವಿ ತಿಳಿಸಿದ್ದಾರೆ.
ಈ ಬಾರಿ ಮತದಾರರಲ್ಲಿ ಜಾಗೃತಿಗಾಗಿ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರನ್ನು ಗುರುತಿಸಿಕೊಳ್ಳಲಾಗಿದೆ ಎಂದು ಡಾ.ಎಂ.ಆರ್ ರವಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ,ಜಿಲ್ಲಾ ಆರೋಗ್ಯ ಅಧಿಕಾರಿ ರಾಮಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.







