ಬಂಟ್ವಾಳ ರೋಟರಿ ಕ್ಲಬ್ ಸುವರ್ಣ ಸಂಭ್ರಮ

ಬಂಟ್ವಾಳ, ಎ. 3: ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿರುವ ಬಂಟ್ವಾಳ ರೋಟರಿ ಕ್ಲಬ್ ಪ್ರಸಕ್ತ ಸಾಲಿನಲ್ಲಿ ಹಲವಾರು ಜನೋಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಕ್ಲಬ್‍ನ ನಿಯೋಜಿತ ಅಧ್ಯಕ್ಷ ಮಂಜುನಾಥ ಆಚಾರ್ಯ ತಿಳಿಸಿದ್ದಾರೆ.
ಮಂಗಳವಾರ ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸುವರ್ಣ ವರ್ಷಾಚರಣೆಗೆ ಕ್ಲಬ್‍ನ ಸ್ಥಾಪಕ ಸದಸ್ಯ ದಯಾನಂದ ಕುಡ್ವ ಅವರು ಇಂದು ಚಾಲನೆ ನೀಡಿದ್ದಾರೆ ಎಂದು ತಿಳಿಸಿದರು.
ಕ್ಲಬ್‍ನ 'ಟೀಚ್' ಯೋಜನೆಯಡಿ ತಾಲೂಕಿನಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲಿನ ಸುಧಾರಣೆಗೆ ಕಾರ್ಯಕ್ರಮ ರೂಪಿಸುವುದು. ಇಂಟರಾಕ್ಟ ಕ್ಲಬ್‍ನ ಮೂಲಕ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು. ಅಂಗನವಾಡಿ ಕೇಂದ್ರಗಳ ಸುಧಾರಣೆಗೆ ಯೋಜನೆ ರೂಪಿಸುವುದು. ರೋಟರಾಕ್ಟ ಕ್ಲಬ್ ಜೊತೆಗೂಡಿ ಯುವ ಸಮುದಾಯವನ್ನು ಸಂಘಟಿಸುವಂತ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
ಕಳೆದ 49 ವರ್ಷಗಳಲ್ಲಿ ಪೂರ್ವಾಧ್ಯಕ್ಷರ, ಸದಸ್ಯರ ಅವಿರತ ಶ್ರಮದಿಂದಾಗಿ ಬಂಟ್ವಾಳ ರೋಟರಿ ಕ್ಲಬ್ ಹತ್ತು ಹಲವು ಸಾಧನೆಗಳನ್ನುಗೈದು ಹಲವಾರು ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಕ್ಲಬ್‍ನ ಹಾಲಿ ಅಧ್ಯಕ್ಷ ಸಂಜೀವ ಪೂಜಾರಿ ಈ ಸಂದರ್ಭದಲ್ಲಿ ತಿಳಿಸಿದರು.
1969ರ ಎಪ್ರಿಲ್ 3ರಂದು 30 ಮಂದಿ ಸದಸ್ಯರು ಸೇರಿಕೊಂಡು ಬಂಟ್ವಾಳ ರೋಟರಿ ಕ್ಲಬ್‍ನ್ನು ಸ್ಥಾಪಿಸಲಾಗಿತ್ತು. ಬಳಿಕ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜದ ಬೆಳವಣಿಗೆಗೆ ಬಂಟ್ವಾಳ ರೋಟರಿ ಕ್ಲಬ್ ತನ್ನದೆ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ನಾರಾಯಣ ಹೆಗ್ಡೆ, ನಿಯೊಇಜಿತ ಕಾರ್ಯದರ್ಶಿ ಶಿವಾನಿ ಬಾಳಿಗ, ಸುವರ್ಣವರ್ಷಾಚರಣೆ ಸಮಿತಿಯ ಸಂಚಾಲಕ ಡಾ.ರಮೇಶಾನಂದ ಸೋಮಯಾಜಿ, ಝೊನಲ್ ಲೆಫ್ಟಿನೆಂಟ್ ಕರುಣಾಕರ ರೈ, ನಿಕಟಪೂರ್ವಾಧ್ಯಕ್ಷ ರಿತೇಶ್ ಬಾಳಿಗಾ ಉಪಸ್ಥಿತರಿದ್ದರು.







