ಆರೋಪಿಗಳನ್ನು 2 ದಿನಗಳಲ್ಲಿ ಪತ್ತೆ ಮಾಡದಿದ್ದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ : ಹಿಂಜಾವೇ
ಕೈರಂಗಳ ಗೋ ಕಳವು ಪ್ರಕರಣ
ಪುತ್ತೂರು,ಎ.3 : ಬಂಟ್ವಾಳ ತಾಲೂಕಿನ ಕೈರಂಗಳದ ಪುಣ್ಯಕೋಟಿ ನಗರದಲ್ಲಿರುವ ಅಮೃತಧಾರಾ ಗೋಶಾಲೆಯಿಂದ ಕಳೆದ ಗುರುವಾರ ಮುಂಜಾನೆ ತಲವಾರು ಹಿಡಿದುಕೊಂಡು ಬಂದು ಬಲಾತ್ಕಾರವಾಗಿ ಗೋವನ್ನು ದರೋಡೆ ಮಾಡಿರುವ ಆರೋಪಿಗಳನ್ನು 2 ದಿನಗಳ ಒಳಗೆ ಪತ್ತೆ ಮಾಡಿ ಬಂಧಿಸದಿದ್ದಲ್ಲಿ ಸಮಾನ ಮನಸ್ಕ ಸಂಘಟನೆಗಳನ್ನು ಸೇರಿಸಿಕೊಂಡು ಹಿಂದೂ ಜಾಗರಣಾ ವೇದಿಕೆ ಜಿಲ್ಲೆಯಾಧ್ಯಂತ ವಿವಿಧ ಕಡೆಗಳಲ್ಲಿ ಸಂವಿಧಾನಬದ್ಧವಾಗಿ , ಅಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟನೆ ಆರಂಭಿಸಲಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಎಚ್ಚರಿಸಿದ್ದಾರೆ.
ಅವರು ಮಂಗಳವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಚುನಾವಣೆ ಘೋಷಣೆಯಾಗಿ ಪೊಲೀಸ್ ಇಲಾಖೆ ಪೂರ್ಣ ಜಾಗೃತರಾಗಿರುವ ಈ ಸಂದರ್ಭದಲ್ಲಿಯೇ ಗೋಶಾಲೆಯ ಬೀಗ ಮುರಿದು, ತಲವಾರು ತೋರಿಸಿ ಬೆದರಿಸಿ ಗೋವಿನ ದರೋಡೆ ಮಾಡುವ ಕೆಲಸ ರಾಜಾರೋಷವಾಗಿ ನಡೆಯುತ್ತಿರುವುದು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ವೈಫಲ್ಯವನ್ನು ಸೂಚಿಸುತ್ತದೆ. ಮಾ.29ರಂದು ಬೆಳಿಗ್ಗೆ ಈ ಘಟನೆ ನಡೆದಿದ್ದರೂ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ವಿಫಲರಾದ ಕಾರಣ ಗೋಶಾಲೆಯ ಮಾಲಕ ರಾಜಾರಾಮ ಭಟ್ ಅವರು ನ್ಯಾಯಕ್ಕಾಗಿ ಆಗ್ರಹಿಸಿ ರವಿವಾರ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಜಿಲ್ಲೆಯ ವಿವಿದೆಡೆಯ ಗೋರಕ್ಷಕರು ಆಗಮಿಸಿ ಅವರ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ನೀಡುತ್ತಿದ್ದಾರೆ. ಆದರೂ ಈ ತನಕ ಆರೋಪಿಗಳ ಪತ್ತೆ ಮಾಡಲು ಪೊಲೀಸ್ ಇಲಾಖೆಗೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದ ಅವರು ನಾಳೆ ಸಂಜೆಯೊಳಗೆ ಆರೋಪಿಗಳ ಪತ್ತೆ ಮಾಡದಿದ್ದರೆ ಹಿಂದೂ ಜಾಗರಣಾ ವೇದಿಕೆ ಅವರ ಬೆಂಬಲಕ್ಕೆ ನಿಂತು, ಆರೋಪಿಗಳ ಪತ್ತೆಗಾಗಿ ಆಗ್ರಹಿಸಿ ಜಿಲ್ಲೆಯಾಧ್ಯಂತ ಪ್ರತಿಭಟನೆ ಆರಂಭಿಸಲಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ಬೆನ್ನಲ್ಲೇ ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂದಕ್ಕೆ ಪಡೆದಿರುವುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ವತಃ ನಾನು ಗೋಮಾಂಸ ತಿನ್ನುತ್ತೇನೆ ಎಂದಿರುವುದು ಗೋ ಕಳ್ಳರಿಗೆ,ಸಾಗಾಟಗಾರರಿಗೆ ಮತ್ತು ಹಂತಕರಿಗೆ ಪ್ರೇರಣೆಯಾಗಿದೆ. ಪ್ರಾರಂಭದಲ್ಲಿ ಗುಡ್ಡೆಗೆ ಮೇಯಲು ಬಿಟ್ಟ ಗೋವುಗಳನ್ನು ಕಳವುಗೈದು ಸಾಗಾಟ ಮಾಡುತ್ತಿದ್ದ ಗೋಕಳ್ಳರು ಆ ಬಳಿಕ ಹಟ್ಟಿಯಿಂದ ರಾತ್ರಿ ಹೊತ್ತು ಕಳವುಗೈಯಲು ಆರಂಭಿಸಿದ್ದರು. ಕಳೆದ 2 ವರ್ಷಗಳಿಂದ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ಬೆದರಿಸಿ ಹಟ್ಟಿಗೆ ನುಗ್ಗಿ ಬೆದರಿಸಿ ಬಲಾತ್ಕಾರವಾಗಿ ಗೋವುಗಳನ್ನು ದರೋಡೆ ಮಾಡಲಾಗುತ್ತಿದೆ. ಜಿಲ್ಲೆಯಾಧ್ಯಂತ ಗೋವುಗಳ ಕಳ್ಳತನ-ದರೋಡೆ ನಿರಂತರವಾಗಿ ನಡೆಯುತ್ತಿದೆ. ಕೈರಂಗಳ ಪರಿಸರವೊಂದರಿಂದಲೇ 75 ಗೋವುಗಳ ಕಳ್ಳತನ ನಡೆದಿದೆ. ಪೊಲೀಸ್ ಇಲಾಖೆಗೆ ದೂರು ನೀಡಿದರೂ ಕಳ್ಳರ ಪತ್ತೆ ಆಗುತ್ತಿಲ್ಲ ಎಂದು ಅವರು ದೂರಿದರು.
ಗೋವು ಆರ್ಥಿಕವಾಗಿ,ಸಾಮಾಜಿಕವಾಗಿ,ಧಾರ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ದೇಶದ ಸಂಪತ್ತು. ಇದು ಕೇವಲ ಹಿಂದೂಗಳ ಧಾರ್ಮಿಕ ಭಾವನೆಗೆ ಮಾತ್ರ ಸೀಮಿತವಾದ ವಿಚಾರವಲ್ಲ. ಆದರೆ ಪೂಜನೀಯ ದೃಷ್ಟಿಯಿಂದ ಜೀವನಾಧಾರಕ್ಕಾಗಿ ಸಾಕುವ ಗೋವುಗಳನ್ನು ಕಳವು-ದರೋಡೆ ಮಾಡಿ ಹತ್ಯೆ ಮಾಡುವ ಮೂಲಕ ದೇಶದ ಸಂಪತ್ತನ್ನು ನಾಶ ಮಾಡುವ, ಹಿಂದೂಗಳ ಧಾರ್ಮಿಕ ಭಾವನೆಯನ್ನು ಕೆರಳಿಸುವ ಕೆಲಸ ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಗೋ ಕಳ್ಳತನ, ಲವ್ ಜಿಹಾದ್, ಮತಾಂತರ, ಕೋಮುಸಂಘರ್ಷಗಳ ಮೂಲಕ ಕರಾವಳಿ ಜಿಲ್ಲೆಯ ಶಾಂತಿಗೆಡಹುವ ಪ್ರಯತ್ನಗಳಾಗುತ್ತಿದೆ ಎಂದು ಅವರು ಆರೋಪಿಸಿದರು.
ಗೋಭಕ್ಷಕರಿಗೆ ಪರ್ಯಾಯವಾಗಿ ಹಂದಿ ಮಾಂಸದ ವ್ಯವಸ್ಥೆ ಮಾಡಿ:
ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಗೋರಕ್ಷಣೆ ಮಾಡುತ್ತೇವೆ, ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೊಳಿಸುತ್ತೇವೆ ಎಂದು ಆಶ್ವಾಸನೆ ನೀಡಬೇಕು ಅಂತಹ ಪಕ್ಷವನ್ನು ನಾವು ಬೆಂಬಲಿಸುತ್ತೇವೆ ಎಂದ ಅವರು ಗೋ ಮಾಂಸವನ್ನು ಆಹಾರವಾಗಿ ಇಟ್ಟುಕೊಂಡಿರುವ ಗೋಭಕ್ಷಕರಿಗೆ ಇದರಿಂದ ಆಹಾರದ ಸಮಸ್ಯೆ ಎದುರಾಗುವುದಾದರೆ ಅವರಿಗೆ ಪರ್ಯಾಯವಾಗಿ ಹಂದಿ ಮಾಂಸದ ವ್ಯವಸ್ಥೆ ಮಾಡಿ. ಬೇಕಾದರೆ 2 ಹೆಣ್ಣು ಹಾಗೂ 2ಗಂಡು ಸೇರಿ 4 ಹಂದಿಗಳನ್ನು ಕೊಟ್ಟು ಸಾಕಲು ತಲಾ ರೂ.1 ಸಾವಿರದಂತೆ ಸಹಾಯಧನ ನೀಡಿ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಮಂಗಳೂರು ವಿಭಾಗದ ಪ್ರಧಾನ ಕಾರ್ಯದರ್ಶಿ ರವಿರಾಜ್ ಬಿ.ಸಿ.ರೋಡ್, ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಪುತ್ತೂರು ತಾಲ್ಲೂಕು ಅಧ್ಯಕ್ಷ ಚಿನ್ಮಯ ರೈ ಮತ್ತು ತಾಲ್ಲೂಕು ಹೋರಾಟ ಪ್ರಮುಖ್ ಅವಿನಾಶ್ ಪುರುಷರಕಟ್ಟೆ ಉಪಸ್ಥಿತರಿದ್ದರು.







