ಜನಪರ ಹೋರಾಟವನ್ನು ನಕ್ಸಲ್ ಎಂದ ಬಿಜೆಪಿ ಕ್ಷಮೆ ಕೋರದಿದ್ದರೆ ಕಾನೂನು ಹೋರಾಟ: ನಟ ಚೇತನ್

ಬೆಂಗಳೂರು, ಎ.3: ಸಂವಿಧಾನಾತ್ಮಕವಾಗಿ ನಡೆದ ದಿಡ್ಡಳ್ಳಿ ಹೋರಾಟವನ್ನು ನಕ್ಸಲ್ ಪ್ರೇರಿತ ಹೋರಾಟ ಹಾಗೂ ಅದರ ನೇತೃತ್ವ ವಹಿಸಿದ್ದ ನನ್ನ ಹಾಗೂ ಎ.ಕೆ.ಸುಬ್ಬಯ್ಯರನ್ನು ನಕ್ಸಲ್ ಪ್ರೇರಿತರು ಎಂದಿರುವ ಬಿಜೆಪಿ ಈ ಕೂಡಲೆ ರಾಜ್ಯದ ಜನತೆಯ ಮುಂದೆ ಕ್ಷಮೆ ಯಾಚಿಸಿ, ಚಾರ್ಜ್‌ಶೀಟ್‌ನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಕಾನೂನಾತ್ಮಕ ಹೋರಾಟ ಮುಂದುವರೆಸುವುದಾಗಿ ನಟ ಚೇತನ್ ತಿಳಿಸಿದರು.
ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ನಡೆಯುವ ಹೋರಾಟಗಳನ್ನು ಹಾಗೂ ಅದರಲ್ಲಿ ಭಾಗವಹಿಸುವವರನ್ನು ನಕ್ಸಲ್ ಪ್ರೇರಿತವೆಂದು ಹೇಳುವ ಮೂಲಕ ಬಿಜೆಪಿ ಜನರ ಹಕ್ಕುಗಳನ್ನೆ ನಿರ್ಣಾಮ ಮಾಡಲು ಮುಂದಾಗಿದೆ. ಒಂದು ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಗೆ ಇಂತಹ ವರ್ತನೆ ಕ್ಷೋಭೆ ತರುವಂತಹದ್ದಲ್ಲ ಎಂದು ಹೇಳಿದರು.
2016ರ ಡಿಸೆಂಬರ್‌ನಿಂದ ದಿಡ್ಡಳ್ಳಿ ಹೋರಾಟ ಪ್ರಾರಂಭವಾಗಿದೆ. ಅಲ್ಲಿನ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸಿದ್ದನ್ನು ಖಂಡಿಸಿ ಹಲವು ದಿನಗಳ ಕಾಲ ಧರಣಿ ನಡೆಸಿದ್ದೆವು. ನಮ್ಮ ಹೋರಾಟ ಎಲ್ಲಿಯೂ ಕಾನೂನ ಮೀರದೆ, ಗಾಂಧಿ, ಅಂಬೇಡ್ಕರ್ ಆಶಯದಂತೆ ಅಹಿಂಸಾತ್ಮಕವಾಗಿ ಹೋರಾಟ ನಡೆಸಿದ್ದೇವೆ. ಈ ಹೋರಾಟವನ್ನು ಸಹಿಸದ ಬಿಜೆಪಿ ನಕ್ಸಲ್ ಪ್ರೇರಿತ ಹೋರಾಟ ಎನ್ನುವ ಮೂಲಕ ನಮ್ಮನ್ನು ತೇಜೋವಧೆ ಮಾಡಲು ಮುಂದಾಗಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಎಲ್ಲ ಜನಪರ ಹೋರಾಟಗಳನ್ನು ನಕ್ಸಲ್ ಪ್ರೇರಿತವೆಂದು ಬಿಂಬಿಸುತ್ತಾ ಹೊರಟಿದೆ. ಹೀಗಾಗಿ ಜನರಿಗೆ ಸತ್ಯವನ್ನು ತಲುಪಿಸುವಂತಹ ಕೆಲಸವನ್ನು ರಾಜ್ಯಾದ್ಯಂತ ಮಾಡಲಾಗುವುದು. ಆ ಮೂಲಕ ಬಿಜೆಪಿಯ ಪ್ರತಾಪ ಸಿಂಹ, ಕೆ.ಜಿ.ಬೋಪಯ್ಯ ಹಾಗೂ ಕಾಂಗ್ರೆಸ್ಸಿನ ಎಂ.ಆರ್.ಸೀತಾರಾಮು ಅವರ ಜನವಿರೋಧಿ ಚಿಂತನೆಗಳನ್ನು ಜನತೆಗೆ ಮುಟ್ಟಿಸಲಾಗುವುದು ಎಂದು ಅವರು ಹೇಳಿದರು.
ದಿಡ್ಡಳ್ಳಿ ಮೂಲ ನಿವಾಸಿ ಸ್ವಾಮಿ ಮಾತನಾಡಿ, 2016ರಲ್ಲಿ ಅರಣ್ಯಾಧಿಕಾರಿಗಳು ನಮ್ಮ ಗುಡಿಸಲುಗಳನ್ನು ಕಿತ್ತು ಬೀದಿಗೆ ತಳ್ಳಿದರು. ಆ ಸಂದರ್ಭದಲ್ಲಿ ನಮಗೆ ದಿಕ್ಕು ತೋಚದಂತಾಯ್ತು. ನಮ್ಮ ಮಕ್ಕಳು ಮಳೆಯಲ್ಲಿ, ಚಳಿಯಲ್ಲಿ ನಡುಗುತ್ತಿದ್ದರು. ಇಂತಹ ಸಂದರ್ಭದಲ್ಲಿ ನಟ ಚೇತನ್ ಹಾಗೂ ಎ.ಕೆ.ಸುಬ್ಬಯ್ಯ ನೇತೃತ್ವದಲ್ಲಿ ನೂರಾರು ಜನರು ನಮಗೆ ಬೆಂಬಲ ಸೂಚಿಸಿದರು. ಇವರ ಹೋರಾಟದ ಫಲವಾಗಿ ನಮಗೆ ನ್ಯಾಯ ದೊರಕಿದೆ. ಇಂತವರನ್ನು ನಕ್ಸಲ್ ಪ್ರೇರಿತರು, ದೇಶದ್ರೋಹಿಗಳೆನ್ನುವವರು ಕೀಳುಮಟ್ಟದ ಮನಸ್ಥಿತಿವುಳ್ಳವರು ಎಂದು ಕಿಡಿಕಾರಿದರು. ಪತ್ರಿಕಾಗೋಷ್ಟಿಯಲ್ಲಿ ವಕೀಲ ಅನಂತ ನಾಯ್ಕಿ, ದಿಡ್ಡಳ್ಳಿ ಮೂಲ ನಿವಾಸಿಗಳಾದ ಲಕ್ಷ್ಮಿ, ರಾಜು ಮತ್ತಿತರರಿದ್ದರು.
ಕಾನೂನಾತ್ಮಕವಾಗಿ ಹೋರಾಟ ಮಾಡಿದ ಫಲವಾಗಿ ದಿಡ್ಡಳ್ಳಿ ನಿರಾಶ್ರಿತರಿಗೆ ನ್ಯಾಯ ಸಿಕ್ಕಿದೆ. ರಾಜ್ಯ ಸರಕಾರ ಅಲ್ಲಿನ ಮೂಲ ನಿವಾಸಿಗಳಿಗೆ 528 ಮನೆಗಳನ್ನು ನಿರ್ಮಿಸಿಕೊಡುತ್ತಿದೆ. ಇದು ಜನಪರ ಆಶಯವುಳ್ಳವರಿಗೆ ಸಂದ ಜವಾಗಿದೆ. ಇದನ್ನು ಸಹಿಸದ ಸ್ವಾರ್ಥ ರಾಜಕಾರಣಿಗಳು ನಕ್ಸಲ್ ಎಂಬ ಹಣೆಪಟ್ಟಿ ಕಟ್ಟುತ್ತಿದ್ದಾರೆ. ಇವರ ವಿರುದ್ಧ ಜನತೆಯಲ್ಲಿ ಜಾಗೃತಿ ಮೂಡಿಸಲಾಗುವುದು.
-ನಟ ಚೇತನ್
ನಟ ಚೇತನ್ ಸಿನೆಮಾದಲ್ಲಿ ಮಾತ್ರ ನಾಯಕನಲ್ಲ. ನೂರಾರು ಕುಟುಂಬಗಳ ಬದುಕನ್ನು ರೂಪಿಸಿದ ಮಹಾನ್ ನಾಯಕ. ದಿಡ್ಡಳ್ಳಿ ಹೋರಾಟದ ನೇತೃತ್ವ ವಹಿಸಿದ್ದ ಅವರು, ನಾವು ತಿನ್ನುವ ಊಟವನ್ನೆ ತಿಂದು ನಮಗೆ ನೈತಿಕ ಶಕ್ತಿ ತುಂಬಿದರು. ಅವರ ಮಾತು, ಸರಳ ಜೀವನ ಹೋರಾಟಕ್ಕೆ ಶಕ್ತಿ ತುಂಬಿ ನಮಗೆ ನ್ಯಾಯ ದೊರಕಿತು.
-ಲಕ್ಷ್ಮಿ ದಿಡ್ಡಳ್ಳಿ ಮೂಲ ನಿವಾಸಿ ಮಹಿಳೆ







