ನೀತಿ ಸಂಹಿತೆ ಉಲ್ಲಂಘನೆ ಆರೋಪ : ಸಚಿವ ರೈ ವಿರುದ್ಧ ಮತ್ತೊಂದು ದೂರು ದಾಖಲು
ಆರು ಮಂದಿಗೆ ನೊಟೀಸ್ ಜಾರಿ

ಬಂಟ್ವಾಳ, ಎ. 3: ಸಾರ್ವಜನಿಕ ಅನುದಾನದಿಂದ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳನ್ನು ಬಳಸಿ ಪತ್ರಿಕೆಯೊಂದರಲ್ಲಿ ಜಾಹೀರಾತು ಪ್ರಕಟಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪದಡಿ ಸಚಿವ ರಮಾನಾಥ ರೈ ಅವರ ವಿರುದ್ಧ ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿಯು ಚುನಾವಣಾಧಿಕಾರಿಗಳಿಗೆ ಲಿಖಿತ ದೂರು ನೀಡಿದೆ. ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಅವರು ಚುನಾವಣಾ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮಾ. 27ರಂದು ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೊಳಿಸಲಾಗಿದ್ದರೂ, ಮಾ. 28ರಂದು ಪತ್ರಿಕೆಯೊಂದರಲ್ಲಿ 'ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ರಮಾನಾಥ ರೈ ಅವರ ಹೆಜ್ಜೆಯ ಗುರುತು' ಎನ್ನುವ ವಿಶೇಷ ಪುರವಣಿ ಪ್ರಕಟಿಸಲಾಗಿತ್ತು. ಸಾರ್ವಜನಿಕ ಅನುದಾನಗಳ ವಿವಿಧ ಶೀರ್ಷಿಕೆಗಳಡಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ಸಾಧನೆ ಎಂದು ಸಚಿವ ಬಿ.ರಮಾನಾಥ ರೈ ಅವರು ಹೇಳಿಕೊಂಡಿದ್ದು, ಸರಕಾರದ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ದೂರಿನಲ್ಲಿ ಆರೋಪಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಕಾನೂನು ಉಲ್ಲಂಘಿಸಿ ಸಾರ್ವಜನಿಕ ಅನುದಾನದ ಕಾಮಗಾರಿಗಳನ್ನು ತಾನು ಮಾಡಿರುವುದಾಗಿ ತಪ್ಪು ಅಭಿಪ್ರಾಯ ಮೂಡಿಸಿ ಮತದಾರರ ಮೇಲೆ ಮಾನಸಿಕ ಪ್ರಚೋದನೆ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಎಚ್ಚರಿಕೆ ನೀಡುವಂತೆ ದೇವದಾಸ ಶೆಟ್ಟಿ ಆಗ್ರಹಿಸಿದ್ದಾರೆ.
ಕಟೌಟ್ ತೆರವು:
ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹೆದ್ದಾರಿ ಸಮೀಪ ಸಚಿವರ ಪ್ರಚಾರ ಕೋರಿ ಹಾಕಲಾದ ಬ್ಯಾನರ್, ಕಟೌಟ್ ತೆರವು ಕಾರ್ಯಾಚರಣೆ ಕೆಲವೊಂದು ವಿವಾದ ಉಂಟು ಮಾಡಿದೆ.
ಇದರಿಂದ ಆಕ್ರೋಶಗೊಂಡಿರುವ ಸಾಮಾಜಿಕ ವಲಯದ ಕಾರ್ಯಕರ್ತರು, ಚುನಾವಣಾಧಿಕಾರಿಗಳಿಗೆ ಒತ್ತಾಯಿಸಿದ್ದು, ಬಳಿಕ ಪುರಸಭಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ.
ಆರು ಮಂದಿಗೆ ನೊಟೀಸ್:
ಬಂಟ್ವಾಳ ತಾಲೂಕಿನ ನೆಟ್ಲ ಶ್ರೀ ನಿಟಿಲಾಪುರ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ವೇದಿಕೆ ಮೇಲೇರಿದ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಆರು ಮಂದಿಗೆ ತಾಲೂಕು ಚುನಾವಣಾಧಿಕಾರಿ ನೊಟೀಸ್ ಜಾರಿಗೊಳಿಸಿದ್ದಾರೆಂದು ತಿಳಿದು ಬಂದಿದೆ.
ದೇವಳದ ಆಡಳಿತ ಮೊಕ್ತೇಸರ, ಸಚಿವ, ಮಾಜಿ ಶಾಸಕ, ಎಪಿಎಂಸಿ ಅಧ್ಯಕ್ಷ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸದಸ್ಯರೊಬ್ಬರ ಮೇಲೆ ತಾಲೂಕು ಚುನಾವಣಾಧಿಕಾರಿ ಅವರು ನೊಟೀಸ್ ಜಾರಿಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾ. 29ರಂದು ನೆಟ್ಲ ಶ್ರೀ ನಿಟಿಲಾಪುರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಗೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ನೊಟೀಸ್ ಜಾರಿಗೊಳಿಸಿದ್ದು, ವಿವರಣೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.







