ಕೈರಂಗಳ: ಟಿ.ಜಿ.ರಾಜಾರಾಮ್ ಭಟ್ ಅಮರಣಾಂತ ಉಪವಾಸ ಮೂರನೇ ದಿನಕ್ಕೆ

ಕೊಣಾಜೆ,ಎ.3: ದನಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕೈರಂಗಳ ಗ್ರಾಮದ ಪುಣ್ಯಕೋಟಿನಗರದ ಗೋಶಾಲೆಯಲ್ಲಿ ಗೋಶಾಲೆಯ ಆವರಣದಲ್ಲಿ ರವಿವಾರದಿಂದ ಟಿ.ಜಿ.ರಾಜಾರಾಮ್ ಭಟ್ ಅವರ ಆರಂಭಗೊಂಡಿರುವ ಆಮರಣಾಂತ ಉಪವಾಸ ಸತ್ಯಾಗ್ರಹವು ಮೂರನೇ ದಿನವೂ ಮುಂದುವರಿದಿದೆ.
ಮಂಗಳವಾರ ಗೋವುಗಳನ್ನು ಕಳೆದುಕೊಂಡವರ ಸಮಾವೇಶವೂ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಟಿ.ಜಿ,ರಾಜಾರಾಮ ಭಟ್ ಅವರು, ನಮ್ಮನ್ನು ಹೆತ್ತತಾಯಿ ಮೊದಲನೆಯದಾದರೆ ಎರಡನೇ ತಾಯಿ ಹಸುವೇ ಆಗಿದೆ. ಈ ಭಾವನೆಗಳ ಅರಿವಿದ್ದುಕೊಂಡೇ ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುವ ದೃಷ್ಟಿಯಿಂದ ಗೋ ಹಂತಕರು ದನಗಳನ್ನು ರಾಜಾರೋಷವಾಗಿ ಕಳ್ಳತನ ನಡೆಸುತ್ತಿದ್ದಾರೆ. ಇನ್ನು ಮುಂದೆಯಾದರೂ ನಾವು ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಸಮಯಬಂದಿದೆ ಎಂದರು.
ವಿಶ್ವಹಿಂದೂ ಪರಿಷತ್‍ನ ಶರಣ್ ಪಂಪುವೆಲ್ ಮಾತನಾಡಿ, ಟಿ.ಜಿ.ರಾಜಾರಾಮ ಭಟ್ ಅವರ ನೇತೃತ್ವದಲ್ಲಿ ಗೋ ಹಂತಕರ ವಿರುದ್ದ ಆರಂಭಗೊಂಡಿರುವ ಉಪವಾಸ ಸತ್ಯಾಗ್ರಹ ಕಾವು ಇದೀಗ ಜಿಲ್ಲೆಯಾದ್ಯಂತ ಪಸರಿಸಿದೆ. ಎಲ್ಲಾ ಸಂಘಟನೆಗಳು ಕೂಡಾ ಈ ಆಂದೋಲನಕ್ಕೆ ಈಗಾಗಲೇ ಬೆಂಬಲ ಸೂಚಿಸಿವೆ ಎಂದರು.
ಸತ್ಯಜಿತ್ ಸುರತ್ಕಲ್, ಕೊಣಾಜೆ ಶಂಕರಭಟ್, ಮನೋಜರಾಂ ತುಳಜಾರಾಮ್, ಮಹೇಶ್ ಚೌಟ, ರಾಮಕೃಷ್ಣ ಪೈ, ಹರಿಯಪ್ಪ, ವಿಶ್ವನಾಥ ಕಾಯೆರ್ಪಲ್ಕೆ, ನಂದರಾಜ್ ಶೆಟ್ಟಿ, ನಿತಿನ್ ಗಟ್ಟಿ, ಬಾಲಕೃಷ್ಣ ರೈ ಮುಂಡಾಜೆ ಮೊದಲಾದವರು ಉಪಸ್ಥಿತರಿದ್ದರು.







