ಅಹಿಂದ ಮತಗಳ ವಿಭಜನೆಗೆ ಬಿಜೆಪಿ ಷಡ್ಯಂತ್ರ: ಎ.ಕೆ.ಸುಬ್ಬಯ್ಯ

ಬೆಂಗಳೂರು, ಎ.3: ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆಯಿದೆ. ಹೀಗಾಗಿ ಅಹಿಂದ ವರ್ಗಗಳ ಮತಗಳನ್ನು ವಿಭಜಿಸುವುದಕ್ಕಾಗಿ ಬಿಜೆಪಿ ತನ್ನ ನೇತೃತ್ವದಲ್ಲಿಯೆ ಹೊಸ ಪಕ್ಷಗಳನ್ನು ಸ್ಥಾಪಿಸುತ್ತಿದೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸಾಮಾಜಿಕ ಹೋರಾಟಗಾರ ಎ.ಕೆ.ಸುಬ್ಬಯ್ಯ ತಿಳಿಸಿದರು.
ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಬಿಜೆಪಿ ವಿರುದ್ಧ ಜನತೆಗೆ ಆಕ್ರೋಶವಿದೆ. ಇದರ ಬಗ್ಗೆ ಅರಿವಿರುವ ಬಿಜೆಪಿ ಕುತಂತ್ರಗಳನ್ನು ನಡೆಸಿ ಅಧಿಕಾರ ಹಿಡಿಯಲು ಷಡ್ಯಂತ್ರಗಳನ್ನು ರೂಪಿಸಲು ಮುಂದಾಗಿದೆ ಎಂದು ಆಪಾದಿಸಿದರು.
ಜನರ ಮತಗಳನ್ನು ಪಡೆದು ಅಧಿಕಾರ ಹಿಡಿದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನೇರವಾಗಿಯೆ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಹೀಗಾಗಿ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ಮತದಾರರನ್ನು ಸಜ್ಜುಗೊಳಿಸಬೇಕಾಗಿದೆ ಎಂದು ಅವರು ಹೇಳಿದರು.
ಬಿಜೆಪಿಯೇತರ ಪಕ್ಷಗಳ ಒಗ್ಗೂಡುವಿಕೆ: ರಾಜ್ಯದ ಶೇ.70ರಷ್ಟು ಜನತೆ ಬಿಜೆಪಿ ವಿರುದ್ಧವಿದ್ದಾರೆ. ಆದರೆ, ಬಿಜೆಪಿಯೇತರ ಮತಗಳ ವಿಭಜನೆಯಿಂದ ಬಿಜೆಪಿಗೆ ಜಯವಾಗುತ್ತಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯೇತರ ಮತಗಳು ವಿಭಜನೆಯಾಗಬಾರದು ಎಂಬ ಸದುದ್ದೇಶದಿಂದ ಬಿಜೆಪಿಯೇತರ ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳುವಂತೆ ಸಂವಿಧಾನ ಉಳಿವಿಗಾಗಿ ಕರ್ನಾಟಕದ ವತಿಯಿಂದ ಎಲ್ಲ ಪಕ್ಷಗಳ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ಅವರು ಹೇಳಿದರು.
ಪ್ರಗತಿಪರ ಚಿಂತಕ ನೂರ್ ಶ್ರೀಧರ್ ಮಾತನಾಡಿ, ಸಂವಿಧಾನ ಉಳಿವಿಗಾಗಿ ಕರ್ನಾಟಕದ ಮುಖ್ಯ ಉದ್ದೇಶ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡುವುದೆ ಆಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಜನಪರ ಆಶಯವುಳ್ಳ ಪಕ್ಷೇತರ ಅಭ್ಯರ್ಥಿಗಳನ್ನು ಬೆಂಬಲಿಸಿ, ಅವರ ಪರವಾಗಿ ಪ್ರಚಾರ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಮೂವ್‌ಮೆಂಟ್ ಫಾರ್ ಜಸ್ಟೀಸ್‌ನ ಪ್ರೊ.ಬಾಬು ಮ್ಯಾಥ್ಯೂ, ಇರ್ಶಾದ್ ಅಹ್ಮದ್ ದೇಸಾಯಿ, ಮಾಜಿ ಸಚಿವೆ ಲಲಿತಾ ನಾಯಕ್, ಸಂವಿಧಾನ ಉಳಿವಿಗಾಗಿ ಕರ್ನಾಟಕದ ಕಾರ್ಯಕಾರಿ ಸಮಿತಿಯ ಸಂಚಾಲಕಿ ಗೌರಿ, ಅಖಿಲಾ ಮತ್ತಿತರರಿದ್ದರು.
ಎ.5ರಂದು ಪ್ರಚಾರಾಂದೋಲನಕ್ಕೆ ಚಾಲನೆ
ಸಂವಿಧಾನ ಉಳಿವಿಗಾಗಿ ಕರ್ನಾಟಕ ವತಿಯಿಂದ ಸಂವಿಧಾನ ವಿರೋಧಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಪ್ರಚಾರಾಂದೋಲನ, ಕಾರ್ಯಾಗಾರಗಳನ್ನು ನಡೆಸುತ್ತಿದ್ದೇವೆ. ಎ.5ರಂದು ಬೆಳಗ್ಗೆ 11.30ಕ್ಕೆ ಶಿರಿಸಿಯಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಆಂದೋಲನವನ್ನು ಉದ್ಘಾಟಿಸಲಿದ್ದಾರೆ. ಅದೇ ದಿನ ಸಂಜೆ ಎನ್‌ಡಿವಿ ಹಾಸ್ಟೆಲ್ ಮೈದಾನದಲ್ಲಿ ಸಂಕಲ್ಪ ಸಮಾವೇಶವನ್ನು ಆಯೋಜಿಸಲಾಗಿದೆ. ಇದರಲ್ಲಿ ಪ್ರಗತಿಪರ ಚಿಂತಕ, ಬಹುಭಾಷಾ ನಟ ಪ್ರಕಾಶ್ ರೈ, ಧಾರ್ಮಿಕ ಮುಖಂಡರು, ಚಳುವಳಿ ನಾಯಕರು ಹಾಗೂ ಸಾಹಿತಿಗಳು ಭಾಗವಹಿಸಲಿದ್ದಾರೆ.







