ಕೆಎಸ್ಸಾರ್ಟಿಸಿ ಬಸ್ಸಿಗೆ ಕಲ್ಲು ತೂರಾಟ ಪ್ರಕರಣ : ಮೂವರು ಆರೋಪಿಗಳು ದೋಷಮುಕ್ತಿ

ಪುತ್ತೂರು,ಎ.3: 6 ವರ್ಷಗಳ ಹಿಂದೆ ಕರ್ನಾಟಕ ಬಂದ್ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ನ್ಯಾಯಾಲಯವು ದೋಷಮುಕ್ತಗೊಳಿಸಿ ಆದೇಶಿಸಿದೆ.
2012ರಲ್ಲಿ ಬೆಂಗಳೂರಿನಲ್ಲಿ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರ ಮುಖಕ್ಕೆ ಮಸಿ ಬಳಿದ ಪ್ರಕರಣವನ್ನು ಖಂಡಿಸಿ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದ ವೇಳೆ ಪುತ್ತೂರು ನಗರದ ಬೈಪಾಸ್ ರಸ್ತೆಯಲ್ಲಿ ಕೆಎಸ್ಸಾರ್ಟಿಸಿ ಬಸ್‍ಗೆ ಕಲ್ಲು ತೂರಾಟ ನಡೆಸಿ ಸಾರ್ವಜನಿಕ ಸೊತ್ತುಗೆ ಹಾನಿ ಮಾಡಿದ ಆರೋಪ ಎದುರಿಸುತ್ತಿದ್ದ ಅರುಣ್ ಕುಮಾರ್ ಪುತ್ತಿಲ, ನವೀನ್ ಪಡ್ನೂರು ಮತ್ತು ನಾರಾಯಣ ಮುಂಡಾಜೆರವರನ್ನು ದೋಷಮುಕ್ತಗೊಳಿಸಿ ಎ.2ರಂದು ನ್ಯಾಯಾಲಯ ತೀರ್ಪು ನೀಡಿದೆ.
ಶ್ರೀರಾಮಸೇನೆಯ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕ್ ಬೆಂಗಳೂರಿನ ಟಿ.ವಿ. ಚಾನೆಲೊಂದರ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ವೇಳೆ ಅವರ ಮುಖಕ್ಕೆ ಗುಂಪೊಂದು ಮಸಿ ಬಳಿದಿತ್ತು. ಈ ಪ್ರಕರಣವನ್ನು ಖಂಡಿಸಿ ಕರ್ನಾಟಕ ಬಂದ್‍ಗೆ ಶ್ರೀರಾಮಸೇನೆ ಕರೆ ನೀಡಿತ್ತು. ಈ ವೇಳೆ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸೊಂದಕ್ಕೆ ಕಲ್ಲು ತೂರಾಟ ನಡೆಸಿ ಹಾನಿ ಮಾಡಲಾಗಿತ್ತು.
ಈ ಬಗ್ಗೆ ಕೇಸು ದಾಖಲಿಸಿಕೊಂಡಿದ್ದ ನಗರ ಠಾಣಾ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಆ ಸಂದರ್ಭದಲ್ಲಿ ಶ್ರೀರಾಮಸೇನೆಯ ಸಂಚಾಲಕರಾಗಿದ್ದ ಅರುಣ್ ಕುಮಾರ್ ಪುತ್ತಿಲ, ಆಗ ಶ್ರೀರಾಮ ಸೇನೆಯ ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ನವೀನ್ ಪಡ್ನೂರು ಮತ್ತು ನಾರಾಯಣ ಮುಂಡಾಜೆ ಅವರನ್ನು ಆರೋಪಿಗಳಾಗಿ ಗುರುತಿಸಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಬಳಿಕ ಈ ಮೂವರು ಜಾಮೀನು ಪಡೆದುಕೊಂಡಿದ್ದರು. ತನಿಖೆ ಪೂರ್ಣಗೊಳಿಸಿದ ಪುತ್ತೂರು ನ್ಯಾಯಾಲಯ ಮೂವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಆರೋಪಿಗಳ ಪರ ವಕೀಲರಾದ ದೇವಾನಂದ ಕೆ, ಮಿಥುನ್ ಮತ್ತು ರಾಕೇಶ್ ವಾದಿಸಿದ್ದರು.







