ರಾಷ್ಟ್ರೀಯ ಶ್ರೇಯಾಂಕ ಪಟ್ಟಿ : ಬೆಂಗಳೂರಿನ ಐಐಎಸ್‌ಸಿಗೆ ಅಗ್ರಸ್ಥಾನ

ಬೆಂಗಳೂರು, ಎ.3: ಕೇಂದ್ರ ಮಾನವಸಂಪನ್ಮೂಲ ಸಚಿವಾಲಯ ಸಿದ್ಧಪಡಿಸಿರುವ ರಾಷ್ಟ್ರೀಯ ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಅತ್ಯುತ್ತಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ರಾಷ್ಟ್ರಮಟ್ಟದ ಶ್ರೇಯಾಂಕಪಟ್ಟಿಯಲ್ಲಿ ದಿಲ್ಲಿ ವಿವಿಯ ಮಿರಾಂದ ಹೌಸ್ ಅತ್ಯುತ್ತಮ ಕಾಲೇಜು, ಎಐಐಎಂಎಸ್ ಅತ್ಯುತ್ತಮ ವೈದ್ಯಕೀಯ ಕಾಲೇಜು, ಬೆಂಗಳೂರಿನ ಎನ್‌ಎಲ್‌ಎಸ್‌ಐಯು ಅತ್ಯುತ್ತಮ ಕಾನೂನು ಕಾಲೇಜು ಎಂಬ ಹೆಗ್ಗಳಿಕೆ ಪಡೆದಿದೆ.
ವಿಶ್ವವಿದ್ಯಾನಿಲಯ ವಿಭಾಗದಲ್ಲಿ ಐಐಎಸ್‌ಸಿ ಪ್ರಥಮ, ಜವಾಹರಲಾಲ್ ನೆಹರೂ ವಿವಿ ದ್ವಿತೀಯ, ಬನಾರಸ್ ಹಿಂದೂ ವಿವಿ ತೃತೀಯ ಸ್ಥಾನ ಪಡೆದಿದೆ. ಖ್ಯಾತ ಉದ್ಯಮಿ ಜೆ.ಎನ್.ಟಾಟಾ, ಮೈಸೂರಿನ ಮಹಾರಾಜರು ಹಾಗೂ ಭಾರತ ಸರಕಾರದ ಸಹಯೋಗದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯನ್ನು 1909ರಲ್ಲಿ ಸ್ಥಾಪಿಸಲಾಗಿದೆ. ಸಂಸ್ಥೆಯು ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮೂಲ ಜ್ಞಾನದ ಅನ್ವೇಷಣೆ ಹಾಗೂ ಸಂಶೋಧನೆಯನ್ನು ಔದ್ಯೋಗಿಕ ಹಾಗೂ ಸಾಮಾಜಿಕ ಪ್ರಯೋಜನಗಳಿಗೆ ಅನ್ವಯಿಸುವ ಕಾರ್ಯಕ್ಕೆ ಪ್ರಾಧಾನ್ಯತೆ ನೀಡುತ್ತಿದೆ.





