ಗೊಬ್ಬರ ಕೇಳಿದ್ದಕ್ಕೆ ಗೋಲಿಬಾರ್ ಮಾಡಿಸಿದ ಯಡಿಯೂರಪ್ಪಗೆ ರೈತರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ: ಸಿದ್ದರಾಮಯ್ಯ
ದಾವಣಗೆರೆಯಲ್ಲಿ ಜನಾಶೀರ್ವಾದ ಯಾತ್ರೆ

ದಾವಣಗೆರೆ, ಎ.03: ಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ಮಾಡಿಸಿದ ಮಾಜಿ ಸಿಎಂ ಯಡಿಯೂರಪ್ಪರಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಕೊನೆ ಹಂತದ ಜನಾಶೀರ್ವಾದ ಯಾತ್ರೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನೇ ರೈತ ನಾಯಕನೆಂದು ಹಸಿರು ಶಾಲು ಹಾಕಿಕೊಂಡು ಹೋಗುವ ಯಡಿಯೂರಪ್ಪ ಒಬ್ಬ ಡೋಂಗಿ ಸ್ವಯಂಗೋಷಿತ ರೈತ ನಾಯಕ. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡಿ ಎಂದರೆ 'ಹಣ ಎಲ್ಲಿದೆ, ನಾವು ಹಣ ಪ್ರಿಂಟ್ ಮಾಡುವ ಮೆಷಿನ್ ಇಟ್ಟುಕೊಂಡಿದ್ದೇವಾ' ಎಂದಿದ್ದ ದಾಖಲೆ ವಿಧಾನಸೌದದಲ್ಲಿದೆ ಎಂದು ಹೇಳಿದರು.
ಹಿಂದೂ-ಮುಸ್ಲಿಂ ಹಾಗೂ ಜಾತಿ-ಜಾತಿಗಳ ನಡುವೆ ಬೆಂಕಿ ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. ಆದುದರಿಂದಾಗಿ ಜನರು ಮುಂದಿನ ಚುನಾವಣೆಯಲ್ಲಿ ಯೋಚನೆ ಮಾಡಿ ಮತ ಚಲಾವಣೆ ಮಾಡಬೇಕು. ಬಿಜೆಪಿಯನ್ನು ಸೋಲಿಸಿ, ಕರ್ನಾಟಕವನ್ನು ಸೌಹಾರ್ದ ರಾಜ್ಯವನ್ನಾಗಿ ಮಾಡಬೇಕು ಎಂದು ನುಡಿದರು.
ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ನಮ್ಮ ಸರಕಾರ ಭ್ರಷ್ಟ ಸರಕಾರ ಎಂದು ಟೀಕಿಸುತ್ತಾರೆ. ಆದರೆ, ಅವರ ಪಕ್ಕದಲ್ಲಿಯೇ ಭ್ರಷ್ಟಚಾರದ ಆರೋಪದಲ್ಲಿ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ, ಜನಾರ್ದನರೆಡ್ಡಿ ಹಾಗೂ ಇನ್ನಿತರ ಮುಖಂಡರನ್ನು ಕೂರಿಸಿಕೊಂಡಿರುತ್ತಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೆ ಯಾವುದೂ ಇಲ್ಲ. ಅಲ್ಲದೆ, ಕಳಂಕ ಹೊತ್ತಿರುವವರನ್ನೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುತ್ತಿದ್ದಾರೆ ಎಂದು ಅವರು ದೂರಿದರು.
ನಮ್ಮ ಸರಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಿದ ಸಂದರ್ಭದಲ್ಲಿ ಇದೇ ಜನ ನಾಯಕರು ಸಿದ್ದರಾಮಯ್ಯ ಜನರನ್ನು ಸೋಮಾರಿಗಳಾನ್ನಾಗಿ ಮಾಡುತ್ತಿದ್ದಾರೆ ಎಂದಿದ್ದರು. ಇದು ಅವರಿಗೆ ಜನರ ಪರವಾಗಿರುವ ಕಾಳಜಿ ತೋರಿಸುತ್ತದೆ ಎಂದ ಅವರು, ಅನ್ನಭಾಗ್ಯ ಕೇಂದ್ರ ಸರಕಾರ ನೀಡುವ ಯೋಜನೆ ಎನ್ನುತ್ತಾರೆ. ಆದರೆ, ಅವರದೇ ಪಕ್ಷದ ಅಧಿಕಾರವಿರುವ ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಹಾಗೂ ಇನ್ನಿತರೆ ರಾಜ್ಯಗಳಲ್ಲಿ ಯಾಕೆ ಈ ಯೋಜನೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಅನಿಲಭಾಗ್ಯ, ಶಾದಿ ಭಾಗ್ಯ, ಶೂ ಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಮಾಡಿದೆ. ಅಪೌಷ್ಠಿಕತೆ, ಗುಡಿಸಲು ಮುಕ್ತ ಹಾಗೂ ಸಾಲ ಮನ್ನಾ ಮಾಡಲಾಗಿದೆ. ರೈತರ ಸಾಲ ಮನ್ನಾ ಮಾಡಿದರೆ ದೇಶದ ಆರ್ಥಿಕತೆ ದಿವಾಳಿಯಾಗುತ್ತದೆ ಎಂದು ಕೇಂದ್ರ ಸರಕಾರ ಹೇಳುತ್ತದೆ. ಲಕ್ಷಾಂತರ ಕಂಪೆನಿಗಳ ಸಾಲ ಮನ್ನಾ ಮಾಡಿದ ಕೇಂದ್ರಕ್ಕೆ, ರೈತರ ಸಾಲ ಮನ್ನಾ ಮಾಡಲು ಸಾಧ್ಯವಾಗಲಿಲ್ಲ. ಅವರಿಗೆ ರೈತರ ಬಗ್ಗೆ ಕಾಳಜಿಯಿಲ್ಲ ಎಂದು ಟೀಕಿಸಿದರು.
ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು ಆತಂಕದಿಂದ ಬದುಕಬೇಕಾಗಿದೆ. ದೇವಸ್ಥಾನಕ್ಕೆ ಹೋದರೆ, ಕುದುರೆ ಮೇಲೆ ಹೋದರೆ ಹಲ್ಲೆ, ಹತ್ಯೆ ಮಾಡುತ್ತಾರೆ. ಇದನ್ನು ನಾವು ಸಹಿಸಬೇಕಾ? ಕಾಂಗ್ರೆಸ್ ಪಕ್ಷ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದ ಅವರು, 9 ಜನ ದಲಿತರ ಕೊಲೆಯಾಯಿತು. ಇದು ಮೋದಿ ಕಣ್ಣಿಗೆ ಕಾಣಲಿಲ್ಲವೇ? ನಾವು ಸಂವಿಧಾನ ಬದಲಾವಣೆ ಮಾಡಲು ಬಂದಿದ್ದೇವೆಂದು ಅನಂತ್ ಕುಮಾರ್ ಹೆಗಡೆ ಹೇಳುತ್ತಾರೆ. ಇದು ನರೇಂದ್ರ ಮೋದಿಗೆ ಕಾಣಲಿಲ್ಲವೇ ? ಅಮಿತ್ ಶಾ ಮೈಸೂರಿಗೆ ಬಂದಾಗ ದಲಿತರು ಪ್ರಶ್ನಿಸಿದರೆ ಅವರ ಹೇಳಿಕೆಗೂ ನಮಗೂ ಏನೂ ಸಂಬಂಧವಿಲ್ಲ ಎನ್ನುತ್ತಾರೆ. ಅವರನ್ನು ಯಾಕೆ ಮಂತ್ರಿ ಮಂಡಲದಲ್ಲಿ ಯಾಕೆ ಇಟ್ಟುಕೊಂಡಿದ್ದೀರಾ ಎಂದರೆ ಸಭೆಯಿಂದ ಹೊರಗೆ ಹಾಕುತ್ತಾರೆ. ಇದೇನಾ ನಿಮ್ಮ ದಲಿತ ಪ್ರೇಮ ಎಂದು ಪ್ರಶ್ನಿಸಿದರು.
ಜೆಡಿಎಸ್ ಅವಕಾಶವಾದಿತನ: ಜೆಡಿಎಸ್ ಗೆ ಎಲ್ಲಿ ಅವಕಾಶ ಸಿಗುತ್ತದೋ ಅಲ್ಲಿ ಸ್ಥಳ ನೋಡಿಕೊಳ್ಳುತ್ತದೆ. ಜೆಡಿಎಸ್ ಗೆ ಮತ ಹಾಕಿದರೆ ಪರೋಕ್ಷವಾಗಿ ಬಿಜೆಪಿಗೆ ಮತ ಹಾಕಿದಂತಾಗುತ್ತದೆ. ಆದುದರಿಂದಾಗಿ ಮುಂದಿನ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಹಾಗೂ ಅವಕಾಶವಾದಿ ಜೆಡಿಎಸ್ ಅನ್ನು ಸೋಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕಾರ್ಯಕರ್ತರಿಗೆ ಕರೆ ನೀಡಿದರು.
ಮಾಜಿ ಮುಖ್ಯಮಂತ್ರಿಗಳಾದ ಜೆ.ಎಚ್.ಪಟೇಲ್, ಕಡಿದಾಳ ಮಂಜಪ್ಪ ಹಾಗೂ ಎಸ್.ಬಂಗಾರಪ್ಪನವರನ್ನು ಉಳಿಸಿಕೊಂಡು ಬಂದಿದ್ದ ಶಿವಮೊಗ್ಗ ಜಿಲ್ಲೆಯ ಮರ್ಯಾದೆಯನ್ನು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಹಾಳು ಮಾಡಿದರು. ಕಳಂಕ ಹೊತ್ತಿರುವ ವ್ಯಕ್ತಿಯನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲಾಗುತ್ತಿದೆ. ಹೀಗಾಗಿ, ಅವರನ್ನು ಮತ್ತೆ ಸಿಎಂ ಮಾಡಬಾರದು.
- ಸಿದ್ದರಾಮಯ್ಯ, ಮುಖ್ಯಮಂತ್ರಿ







