ಪೈರಿನ ಕಳೆಗೆ ಬೆಂಕಿ ಹಚ್ಚುವುದರಿಂದ ದಿಲ್ಲಿಯ ಮಾಲಿನ್ಯ ದುಪ್ಪಟ್ಟು: ಹಾರ್ವರ್ಡ್ ಅಧ್ಯಯನ

ಹೊಸದಿಲ್ಲಿ, ಎ.3: ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಪಂಜಾಬ್‌ನಲ್ಲಿ ಹೆಚ್ಚಾಗಿ ಗದ್ದೆಗಳಲ್ಲಿ ಉಳಿಕೆಯಾದ ಪೈರಿನ ಕಳೆಗಳಿಗೆ ಬೆಂಕಿ ಹಚ್ಚುವುದರಿಂದ ಉಂಟಾಗುವ ಹೊಗೆಯ ಕಾರಣ ಆ ತಿಂಗಳಲ್ಲಿ ದಿಲ್ಲಿಯಲ್ಲಿ ವಾಯು ಮಾಲಿನ್ಯವೂ ದುಪ್ಪಟ್ಟಾಗಿರುತ್ತದೆ ಎಂದು ನಾಸಾದ ಉಪಗ್ರಹದಿಂದ ಪಡೆದ ದತ್ತಾಂಶಗಳ ಆಧಾರದಲ್ಲಿ ಹಾರ್ವರ್ಡ್ ನಡೆಸಿದ ಅಧ್ಯಯನದಲ್ಲಿ ತಿಳಿಸಲಾಗಿದೆ.
ವಾಯುವ್ಯ ಭಾರತದ ರೈತರು ಕೊಯ್ಲು ನಡೆಸಿದ ನಂತರ ಉಳಿದ ಪೈರಿನ ಕಳೆಯನ್ನು ಸುಡುವ ಮೂಲಕ ಮುಂದಿನ ಬೆಳೆಗಾಗಿ ಗದ್ದೆಯನ್ನು ಸಿದ್ಧಪಡಿಸುತ್ತಾರೆ. ಹೀಗೆ ಸುಡುವ ವೇಳೆ ಉಂಟಾಗುವ ಹೊಗೆ ಯಾವ ಮಟ್ಟದಲ್ಲಿ ಈಗಾಗಲೇ ಗಂಭೀರ ಸ್ಥಿತಿಗೆ ತಲುಪಿರುವ ಹೊಸದಿಲ್ಲಿಯ ಮಾಲಿನ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಪ್ರಮುಖ ಪ್ರಶ್ನೆ. ಈಗಾಗಲೇ ವಾಯು ಮಾಲಿನ್ಯ ಸಮಸ್ಯೆಯಿಂದ ಬಳಲುತ್ತಿರುವ ದಿಲ್ಲಿಯಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ ಶರತ್ಕಾಲದಲ್ಲಿ ದಟ್ಟ ಹೊಗೆಯು ಜನರಿಗೆ ಉಸಿರುಗಟ್ಟಿದ ಅನುಭವವನ್ನು ನೀಡುತ್ತಿದೆ.
ಕೆಲವು ವರ್ಷಗಳಿಂದ ಬೆಳೆಗಳನ್ನು ಸುಡುವುದು ಅಕ್ರಮವಾಗಿದ್ದರೂ ಇದರಿಂದ ದಿಲ್ಲಿಯ ವಾತಾವರಣಕ್ಕೆ ಎಷ್ಟು ಹೊಗೆಯು ಸೇರುತ್ತಿದೆ ಎಂಬುದನ್ನು ಅಳೆಯುವುದು ಕಷ್ಟವಾಗಿರುವ ಕಾರಣ ಈ ಪದ್ಧತಿಯನ್ನು ಪರಿಣಾಮಕಾರಿಯಾಗಿ ತಡೆಯುವುದು ಸಾಧ್ಯವಾಗಿಲ್ಲ. ಇದೀಗ ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ನಾಸಾದ ಸಂಶೋಧಕರು, ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಪಂಜಾಬ್‌ನಲ್ಲಿ ಬೆಳೆ ಸುಡುವ ಕಾರ್ಯವು ಹೆಚ್ಚಾಗಿ ನಡೆಯುವುದರಿಂದ ಆ ಸಮಯದಲ್ಲಿ ದಿಲ್ಲಿಯಲ್ಲಿ ವಾಯು ಮಾಲಿನ್ಯ ಮಟ್ಟವು ದುಪ್ಪಟ್ಟಾಗುತ್ತದೆ ಎಂದು ತಿಳಿಸಿದ್ದಾರೆ.







