ನರೇಂದ್ರ ಮೋದಿ ಕೇವಲ ಭಾಷಣ ಮಾಡುತ್ತಾರೆ, ರೈತರ ಸಂಕಷ್ಟಗಳಿಗೆ ಸ್ಪಂದಿಸುವುದಿಲ್ಲ: ರಾಹುಲ್ ಗಾಂಧಿ
ಹೊನ್ನಾಳಿ,ಎ.03: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ರೈತ ಪರ ಸರಕಾರ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಣ್ಣಿಸಿದರು.
ಮಂಗಳವಾರ ಇಲ್ಲಿನ ಹಿರೇಕಲ್ಮಠ ವೃತ್ತದಲ್ಲಿ ಹಮ್ಮಿಕೊಂಡ ಜನಾಶೀರ್ವಾದ ಯಾತ್ರೆ ವೇಳೆ ಅವರು ಸಾರ್ವಜನಿಕರ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇವಲ ಭಾಷಣ ಮಾಡುತ್ತಾರೆ. ರೈತರ ಸಂಕಷ್ಟಗಳಿಗೆ ಸ್ಪಂದಿಸುವುದಿಲ್ಲ. ಭೀಕರ ಬರಗಾಲದ ಕಾರಣ ನೊಂದಿರುವ ರೈತರ ನೆರವಿಗೆ ಧಾವಿಸಲು ಸಾಲ ಮನ್ನಾ ಮಾಡಬೇಕು ಎಂದು ಅನೇಕ ಬಾರಿ ಒತ್ತಾಯಿಸಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದರೆ, ರೈತರ ಸಂಕಷ್ಟ ಬಗ್ಗೆ ಒಮ್ಮೆ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ ಮರುದಿನವೇ ಸುಮಾರು 8 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ರೈತರ ಸಾಲ ಮನ್ನಾ ಮಾಡಿದರು. ಇದು ಬದ್ಧತೆಯುಳ್ಳ ಸರಕಾರದ ಲಕ್ಷಣ ಎಂದು ಶ್ಲಾಘಿಸಿದರು.
ಕಾಂಗ್ರೆಸ್ ಪಕ್ಷ ಬಡವರು, ರೈತರು, ದೀನ-ದಲಿತರ ಕಲ್ಯಾಣಕ್ಕೆ ಸದಾ ಶ್ರಮಿಸುವ ಪಕ್ಷವಾಗಿದೆ. ಆದರೆ, ಬಿಜೆಪಿ ಬಡವರ ಕಷ್ಟಗಳನ್ನು ಅರಿಯದ ಪಕ್ಷವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇತರರಿಗೆ ದೇಶದ ನಾಡಿಮಿಡಿತದ ಪರಿಚಯವೇ ಇಲ್ಲ ಎಂದು ಹರಿಹಾಯ್ದರು. ಭಾರತ ಸರಕಾರ ಐದು ವರ್ಷಗಳಲ್ಲಿ ದಲಿತ, ಆದಿವಾಸಿಗಳ ಕಲ್ಯಾಣ ಕಾರ್ಯಕ್ರಮಗಳಿಗೆ ನೀಡುವಷ್ಟು ಹಣವನ್ನು ಕರ್ನಾಟಕ ಸರಕಾರ ಕೇವಲ ಒಂದೇ ವರ್ಷದಲ್ಲಿ ಈ ಉದ್ದೇಶಕ್ಕಾಗಿ ನೀಡಿದೆ. ಇದು ಕರ್ನಾಟಕ ರಾಜ್ಯ ಸರಕಾರದ ಹೆಮ್ಮೆ ಎಂದು ಹೇಳಿದರು.
ಸಿಬಿಎಸ್‍ಇ ಪ್ರಶ್ನೆಪತ್ರಿಕೆಗಳು ಬಹಿರಂಗಗೊಳ್ಳುತ್ತವೆ. ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಗೂ ಮೊದಲೇ ಬಿಜೆಪಿ ಮುಖಂಡರೊಬ್ಬರು ಚುನಾವಣೆ ಬಗೆಗಿನ ತಪ್ಪು ತಪ್ಪಾದ ದಿನಾಂಕಗಳನ್ನು ಫೇಸ್ ಬುಕ್‍ನಲ್ಲಿ ಪ್ರಕಟಿಸುತ್ತಾರೆ. ಇದೆಲ್ಲವನ್ನೂ ನೋಡಿದರೆ ಕೇಂದ್ರ ಸರಕಾರದ ಆಡಳಿತ ವೈಖರಿ ತಿಳಿಯುತ್ತದೆ ಎಂದು ಕುಟುಕಿದರು.
ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಜನಪರ ಆಡಳಿತ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಉತ್ತಮವಾಗಿ ಪಕ್ಷ ಸಂಘಟಿಸಿದ್ದಾರೆ. ಉತ್ತಮ ಆಡಳಿತಕ್ಕೆ ಹಾಗೂ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕನ್ನಡದಲ್ಲಿ ಭಾಷಣ: ಹೊನ್ನಾಳಿಗೆ ಮಂಗಳವಾರ ಸಂಜೆ 4.15 ರ ಸುಮಾರಿಗೆ ಆಗಮಿಸಿದ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆಯ ವಿಶೇಷ ಬಸ್‍ನಿಂದಲೇ ಜನರತ್ತ ಕೈ ಬೀಸಿದರು. ನಮಸ್ಕಾರ ಎಂದು ಹೇಳುವ ಮೂಲಕ ಕನ್ನಡದಲ್ಲಿ ಭಾಷಣ ಆರಂಭಿಸಿದರು. ತಕ್ಷಣ ಸಾರ್ವಜನಿಕರು ಜೈಕಾರ ಹಾಕುವ ಮೂಲಕ ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.
ಜನರತ್ತ ಸಾಗಿ ಬಂದ ರಾಹುಲ್: ಭಾಷಣ ನಂತರ ಭದ್ರತೆಯನ್ನೂ ಲೆಕ್ಕಿಸದೇ ನೆರೆದಿದ್ದ ಜನರತ್ತ ಸಾಗಿ ಬಂದ ರಾಹುಲ್ ಗಾಂಧಿ, ಜನರಿಗೆ ಹಸ್ತಲಾಘವ ನೀಡುವ ಮೂಲಕ ಗಮನಸೆಳೆದರು. ಇದಾದ ಬಳಿಕ ಬಸ್ ಏರಿ ಮಲೇಬೆನ್ನೂರು ಮೂಲಕ ಹರಿಹರದ ಕಡೆಗೆ ಪ್ರಯಾಣ ಬೆಳೆಸಿದರು.
ಸೆಲ್ಫಿಗೆ ಮುಗಿಬಿದ್ದ ಮುಖಂಡರು: ಸಿಎಂ ಸಿದ್ಧರಾಮಯ್ಯ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ದೃಶ್ಯ ಕಂಡುಬಂತು. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಕಾಂಗ್ರೆಸ್ ಮುಖಂಡರು-ಕಾರ್ಯಕರ್ತರ ಬಳಿ ಆಗಮಿಸಿ, ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಿದರು.
ಸಚಿವರಾದ ಡಿ.ಕೆ. ಶಿವಕುಮಾರ್, ಎಸ್.ಎಸ್. ಮಲ್ಲಿಕಾರ್ಜುನ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ವೀಕ್ಷಕ ಶ್ರೀನಾಥ್, ಶಾಸಕ ಡಿ.ಜಿ. ಶಾಂತನಗೌಡ, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಜಿಪಂ ಸದಸ್ಯ ದೊಡ್ಡೇರಿ ಡಿ.ಜಿ. ವಿಶ್ವನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್. ಸುರೇಂದ್ರ, ಪಪಂ ಸದಸ್ಯರಾದ ಎಚ್.ಬಿ. ಅಣ್ಣಪ್ಪ, ಎಚ್.ಡಿ. ವಿಜೇಂದ್ರಪ್ಪ, ಮಲ್ಲೇಶಪ್ಪ, ತಾಪಂ ಸದಸ್ಯ ವಿಜಯ್‍ಕುಮಾರ್, ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ. ಗದ್ದಿಗೇಶ್, ಮುಖಂಡರಾದ ಡಿ.ಎಸ್. ಪ್ರದೀಪ್, ಬಿ. ಸಿದ್ಧಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಮಧುಗೌಡ, ಉಪಾಧ್ಯಕ್ಷ ಎಚ್.ಎಸ್. ರಂಜಿತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಾಲ್ಕು ಗಂಟೆಗಳ ಕಾಲ ಕಾದ ಜನತೆ:
ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಹೊನ್ನಾಳಿಗೆ ಮಧ್ಯಾಹ್ನ 12ಕ್ಕೆ ಆಗಮಿಸಿದ ಜನರು ಸಂಜೆ 4 ಗಂಟೆವರೆಗೂ ಕಾದರು. ಸುಡು ಬಿಸಿಲನ್ನೂ ಲೆಕ್ಕಿಸದೇ ರಾಹುಲ್ ಗಾಂಧಿಯನ್ನು ಕಣ್ತುಂಬಿಕೊಳ್ಳಲು ಜನರು ಕಾದು ನಿಂತಿದ್ದ ದೃಶ್ಯ ಗಮನಸೆಳೆಯಿತು.