ಮೋದಿ ಸರಕಾರದ ಅವಧಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆ: ರಾಹುಲ್ ಗಾಂಧಿ

ದಾವಣಗೆರೆ, ಎ.03: ಕೇಂದ್ರದಲ್ಲಿ ಯುಪಿಎ ಸರಕಾರದ ಆಡಳಿತವಿದ್ದಾಗ ಪೆಟ್ರೋಲ್ ಬೆಲೆ 160 ಡಾಲರ್ ಇತ್ತು. ಬೆಲೆ ಕಡಿಮೆಯಿತ್ತು. ಆದರೆ, ಮೋದಿ ಪ್ರಧಾನಿಯಾದ ನಂತರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾದರೂ ದೇಶದಲ್ಲಿ ಪೆಟ್ರೋಲ್ ಬೆಲೆ ಇಳಿಕೆಯಾಗಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷದ ಕೊನೆ ಹಂತದ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ಪ್ರಧಾನಿ ಮೋದಿ ಅವರ ಗೆಳೆಯರಿಗೆ ಪೆಟ್ರೋಲ್ ಸರಬರಾಜು ನೀಡಿದ್ದು, ಬಡವರಿಂದ ಸುಲಿಗೆ ಮಾಡಿ ಅವರ ಜೇಬು ತುಂಬಿಸುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದಲ್ಲಿ ಕಾನೂನು ವ್ಯವಸ್ಥೆ ಹದಗೆಡುತ್ತಿದ್ದು, ಜನರು ನ್ಯಾಯಕ್ಕಾಗಿ ಹೋಗುತ್ತಾರೆ. ಆದರೆ, ನ್ಯಾಯ ನೀಡಬೇಕಾದ ನ್ಯಾಯಧೀಶರು ಪತ್ರಿಕಾಗೋಷ್ಠಿ ಮಾಡಿ ಜನರ ಮುಂದೆ ಕೈ ಮುಗಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದು ಪ್ರಧಾನಿ ಮೋದಿ ಸರಕಾರದ ಆಡಳಿತ ಎಂದ ಅವರು, ಮೋದಿ ದೇಶದ ಜನರ ಮಾತು ಕೇಳುತ್ತಿಲ್ಲ. ನಮ್ಮ ಮಾತು ಮಾತ್ರ ಕೇಳಿ ಎಂದು ಹೇಳುತ್ತಿದ್ದಾರೆ. ಹೀಗಾದರೆ, ದೇಶದ ಜನರ ಮಾತು ಕೇಳುವವರು ಯಾರು ಎಂದು ಪ್ರಶ್ನಿಸಿದರು.
ಭಾರತಕ್ಕೆ ದೊಡ್ಡ ಇತಿಹಾಸವಿದೆ. ಇಲ್ಲಿನ ಸಂಸ್ಕೃತಿ ಅಪಾರವಾದ ಗೌರವವನ್ನು ಪಡೆದುಕೊಂಡಿದೆ ಮಹಾತ್ಮಗಾಂಧಿ ಶಾಂತಿಯ ಸಂದೇಶ ಸಾರಿದ್ದಾರೆ. ಆದರೆ, ಕೇಂದ್ರ ಸರಕಾರ ಅಹಿಂಸೆಯನ್ನು ಪ್ರತಿಪಾದಿಸುತ್ತಿದೆ. ಮೋದಿ ನಮ್ಮ ದೇಶದ ಇತಿಹಾಸವನ್ನು ಮೊದಲು ತಿಳಿದುಕೊಳ್ಳಲಿ ಎಂದ ಅವರು, ಬಸವಣ್ಣ ನುಡಿದಂತೆ ನಡೆ ಎಂದಿದ್ದರು ನಮ್ಮ ಪ್ರಧಾನಿ ಬಸವಣ್ಣನ ಹೆಸರು ಹೇಳುತ್ತಾರೆ. ಆದರೂ, ಅವರು ಹೇಳಿದ ತತ್ವಗಳನ್ನು ಪಾಲಿಸುತ್ತಿಲ್ಲ ಎಂದು ದೂರಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಮಹಿಳೆಯರು, ಯುವಕರು, ದಲಿತ, ಅಲ್ಪಸಂಖ್ಯಾತ, ಹಿಂದುಳಿದವರು ಸೇರಿದಂತೆ ಎಲ್ಲ ವರ್ಗಗಳ ಜನರನ್ನು ಸಮಾನವಾಗಿ ಸಾಮಾಜಿಕ ನ್ಯಾಯ ಒದಗಿಸಲಾಗುತ್ತದೆ ಎಂದರು. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ರಂತಹ ಎಲ್ಲ ನಾಯಕರಿದ್ದರೂ, ನನ್ನ ಅವಶ್ಯಕತೆಯಿದೆ ಎಂದು ಕರೆದರೆ ನಾನು ಬರುತ್ತೇನೆ. ನಿಮ್ಮೆಲ್ಲರೊಂದಿಗೆ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







