ಯಡಿಯೂರಪ್ಪರದ್ದು ಅತ್ಯಂತ ಭ್ರಷ್ಟ ಸರ್ಕಾರ ಎನ್ನುವ ಮೂಲಕ ಅಮಿತ್ ಶಾ ಸತ್ಯ ಹೇಳಿದ್ದಾರೆ: ರಾಹುಲ್ ಗಾಂಧಿ

ದಾವಣಗೆರೆ,ಎ.03: ಯಡಿಯೂರಪ್ಪ ಸರ್ಕಾರ ಅತ್ಯಂತ ಭ್ರಷ್ಟಾಚಾರದ ಸರ್ಕಾರ ಎನ್ನುವ ಮೂಲಕ ಅಮಿತ್ ಶಾ ಮೊದಲ ಬಾರಿಗೆ ಸತ್ಯ ಹೇಳಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದರು.
ಹೊನ್ನಾಳಿ ಪಟ್ಟಣದಲ್ಲಿ ರೋಡ್ ಶೋ ನಡೆಸಿದ ಅವರು, ಬಿಜೆಪಿಯ ನಾಲ್ಕು ಸಚಿವರು ಜೈಲಿಗೆ ಹೋಗಿ ಬಂದರು. ನೀರವ್ ಮೋದಿ, ಲಲಿತ್ ಮೋದಿ, ಮಲ್ಯ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆದರೂ ಪ್ರಧಾನಿ ನರೇಂದ್ರ ಮೋದಿ ತುಟಿ ಬಿಚ್ಚಲಿಲ್ಲ ಎಂದು ಕೇಂದ್ರ ಸರಕಾರದ ನಡೆಯನ್ನು ಟೀಕಿಸಿದರು.
ಅದ್ದೂರಿ ಸ್ವಾಗತ: 70 ವರ್ಷಗಳ ನಂತರ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷರೊಬ್ಬರ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಹೊನ್ನಾಳ್ಳಿಯಲ್ಲಿ ಅವರ ಸ್ವಾಗತಕ್ಕಾಗಿ ಸಕಲ ಸಿದ್ದತೆ ಕೈಗೊಳ್ಳಲಾಗಿತ್ತು. ಎಲ್.ಐ.ಸಿ ಮೈದಾನದಲ್ಲಿ ಬಿರು ಬಿಸಿಲು ಲೆಕ್ಕಿಸದೆ ಪಕ್ಷದ ಧ್ವಜ ಹಿಡಿದು ಅಭಿಮಾನಿಗಳು ಕುಳಿತಿದ್ದರು. ಡೊಳ್ಳು ಕುಣಿತ, ಡ್ರಮ್ ವಾದ್ಯಗಳ ಮೂಲಕ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ರೋಡ್ ಶೋ ಎಲ್‍ಐಸಿ ಮೈದಾನದಿಂದ ಆರಂಭವಾಗಿ ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ತೆರಳಿತು.
ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಇದ್ದರು.
ಹರಿಹರ ತಾಲೂಕಿನ ಬೆಳ್ಳೂಡಿ ಹತ್ತಿರದ ಕನಕ ಗುರುಪೀಠಕ್ಕೆ ಭೇಟಿ ನೀಡಿದ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕಂಬಳಿ ಹೊದಿಸಿ ಶ್ರೀ ನಿರಂಜನಾನಂದ ಪುರಿ ಶ್ರೀಗಳು ಬರಮಾಡಿಕೊಂಡರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಈ. ಪರಮೇಶ್ವರ್, ವೇಣುಗೋಪಾಲ ಮತ್ತಿತರರಿದ್ದರು







