ಮೈಸೂರು: ಉದ್ಯಮಿ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ಬಂಧನ

ಮೈಸೂರು,ಏ.3: ಇಂಡಸ್ಟ್ರೀಸ್ ನ ಮಾಲೀಕರೋರ್ವರನ್ನು ದೊಣ್ಣೆ ಮತ್ತು ಕಲ್ಲಿನಿಂದ ಹೊಡೆದು ಕೊಲೆಗೈದ ಘಟನೆ ಮೇಟಗಳ್ಳಿಯಲ್ಲಿ ಮಾ.28ರಂದು ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮೈಸೂರಿನ ಮೇಟಗಳ್ಳಿ ಸುತ್ತಮುತ್ತಲ ನಿವಾಸಿಗಳಾದ ಹೋಬಳೇಗೌಡರ ಮಗ ಸ್ವಾಮಿ(52),ವಿಜಯ್ ಅಲಿಯಾಸ್ ವಿಜಿ(25), ಪ್ರದೀಪ್ ಅಲಿಯಾಸ್ ಕಾಟು(27),ಪ್ರದೀಪ್ ಅಲಿಯಾಸ್ ನಾಗೇಶ್(30) ಎಂದು ಗುರುತಿಸಲಾಗಿದ್ದು, ಈ ನಾಲ್ವರು ಶಿವಶಕ್ತಿ ಇಂಡಸ್ಟ್ರೀಸ್ ಮಾಲೀಕ ಹರೀಶ್ ಕುಮಾರ್ ಅವರನ್ನು ಕೊಲೆಗೈದಿದ್ದರು.
ಹರೀಶ್ ಕುಮಾರ್ ದೊಡ್ಡಪ್ಪ ಚಂದ್ರಪ್ಪ ಹಾಗೂ ಸ್ವಾಮಿ ನಡುವೆ ಹಣಕಾಸಿನ ವ್ಯವಹಾರ ಇತ್ತು. ಜೊತೆಗೆ ಇವರ ಶಿವಶಕ್ತಿ ಇಂಡಸ್ಟ್ರೀಸ್ ಪಕ್ಕ ಸಣ್ಣ ಪೆಟ್ಟಿಗೆ ಅಂಗಡಿ ಇಟ್ಟುಕೊಳ್ಳಲು ಅವಕಾಶ ನೀಡಿದ್ದರು. ಮೂರು ವರ್ಷಗಳ ಹಿಂದೆ ದೊಡ್ಡಪ್ಪ ಕಾಲವಾದ ನಂತರ ಹರೀಶ್ ಸ್ವಾಮಿಗೆ ಅಂಗಡಿ ತೆರವುಗೊಳಿಸುವಂತೆ ಒತ್ತಾಯಿಸಲಾರಂಭಿಸಿದ್ದರು. ಇದರಿಂದ ಹರೀಶ್ ಮತ್ತು ಸ್ವಾಮಿ ನಡುವೆ ಜಗಳ ನಡೆದಿದ್ದು, ಇದೇ ಕಾರಣಕ್ಕೆ ಹರೀಶ್ ಕುಮಾರ್ ನನ್ನು ಕೊಲೆಗೈದಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಮೇಟಗಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಆರಂಭಿಸಿದ ಇನ್‍ಸ್ಪೆಕ್ಟರ್ ಬಿ.ಜಿ.ರಾಘವೇಂದ್ರಗೌಡ ಖಚಿತ ಮಾಹಿತಿ ಆದರಿಸಿ ರವಿವಾರ ನಗರದ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.







