ಸಿಬಿಎಸ್ ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಆರೆಸ್ಸೆಸ್-ಸಿಬಿಎಸ್ ಸಿ ಒಳ ಒಪ್ಪಂದದ ಕುರಿತು ತನಿಖೆಗೆ ಒತ್ತಾಯ

ಬೆಂಗಳೂರು, ಎ.3: ಸಿಬಿಎಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಆರೆಸ್ಸೆಸ್ ಹಾಗೂ ಸಿಬಿಎಸ್ಸಿ ಒಳ ಒಪ್ಪಂದದ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಬೆಂಗಳೂರು ಘಟಕವು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಒತ್ತಾಯಿಸಿತು.
ಈ ವೇಳೆ ಕ್ಯಾಂಪಸ್ ಫ್ರಂಟ್ ಬೆಂಗಳೂರು ಜಿಲ್ಲಾಧ್ಯಕ್ಷರಾದ ಮುಬಾರಕ್ ಮಾತನಾಡಿ, ಪ್ರಶ್ನೆ ಪತ್ರಿಕೆ ಸೋರಿಕೆಯು ಶಿಕ್ಷಣ ವ್ಯವಸ್ಥೆಯನ್ನೆ ಬೆಚ್ಚಿಬೀಳಿಸುವಂತ ಘಟನೆಯಾಗಿದ್ದು, ಮಂಡಳಿಯು ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ಎಂಬ ಹೊರೆಯನ್ನು ಹೊರಿಸಿ ವಿದ್ಯಾರ್ಥಿ ಹಾಗೂ ಪೋಷಕರನ್ನು ಇನ್ನಷ್ಟು ಮಾನಸಿಕ ಒತ್ತಡಕ್ಕೆ ದೂಡಿದೆ ಎಂದು ಅಪಾಧಿಸಿದರು.
ಸಿಬಿಎಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಆರೆಸ್ಸೆಸ್ ವಿದ್ಯಾರ್ಥಿ ಘಟಕದ ಮುಖಂಡ ನೇರ ಆರೋಪಿಯಾಗಿದ್ದು, ಶಿಕ್ಷಣ ವ್ಯವಸ್ಥೆಯನ್ನೆ ಬುಡಮೇಲುಗೊಳಿಸುವ ವ್ಯವಸ್ಥಿತ ಷಡ್ಯಂತ್ರವು ನಡೆಯುತ್ತಿದೆ. ಬಿಜೆಪಿಯ ಅಂಗವಾಗಿರುವ ಎಬಿವಿಪಿ ವಿದ್ಯಾರ್ಥಿಗಳ ಪರ ಹೋರಾಟ ಎಂಬ ಮುಸುಕಿನಲ್ಲಿ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಅವರು ಒತ್ತಾಯಿಸಿದರು.
ರಾಜ್ಯ ಉಪಾಧ್ಯಕ್ಷ ಮುಸವ್ವಿರ್ ಮಾತನಾಡಿ, ಸಿಬಿಎಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವದೇ ಈ ಎಲ್ಲ ಅವಾಂತರಕ್ಕೆ ಮುಖ್ಯ ಕಾರಣವಾಗಿದೆ. ಒಟ್ಟಾರೆಯಾಗಿ ದೇಶದ ಶಿಕ್ಷಣದ ಪಾರದರ್ಶಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ವೈಫಲ್ಯತೆಯು ಎದ್ದು ಕಾಣುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು ಈ ವೇಳೆ ಹಲವಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರಕಾರ ಮತ್ತು ಸಿಬಿಎಸ್ಸಿ ವೈಫಲ್ಯತೆಯ ವಿರುದ್ಧ ಧಿಕ್ಕಾರ ಕೂಗಿದರು.







