17 ಕೋಟಿ ವರ್ಷ ಹಿಂದಿನ ಡೈನೊಸಾರ್ಸ್ ಹೆಜ್ಜೆ ಗುರುತುಗಳು ಪತ್ತೆ

ಲಂಡನ್, ಎ. 3: ಸುಮಾರು 17 ಕೋಟಿ ವರ್ಷಗಳ ಹಿಂದಿನ ಡೈನೊಸಾರ್‌ಗಳ ಹಲವಾರು ಹೆಜ್ಜೆ ಗುರುತುಗಳು ಸ್ಕಾಟ್‌ಲ್ಯಾಂಡ್‌ನ ಐಲ್ ಆಫ್ ಸ್ಕೈಪ್ (ಸಣ್ಣ ದ್ವೀಪ)ನಲ್ಲಿ ಪತ್ತೆಯಾಗಿವೆ ಎಂದು ವಿಜ್ಞಾನಿಗಳು ಮಂಗಳವಾರ ತಿಳಿಸಿದ್ದಾರೆ.
ಈ ಹೆಜ್ಜೆ ಗುರುತುಗಳು ಮಧ್ಯ ಜುರಾಸಿಕ್ ಯುಗದ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಲಿವೆ.
‘‘ಸ್ಕೈ ದ್ವೀಪದಲ್ಲಿ ಹೆಚ್ಚು ಹೆಚ್ಚು ಶೋಧ ನಡೆಸಿದಂತೆಲ್ಲ ಹೆಚ್ಚು ಹೆಚ್ಚು ಡೈನೊಸಾರ್ ಹೆಜ್ಜೆ ಗುರುತುಗಳನ್ನು ನಾವು ಕಾಣುತ್ತಿದ್ದೇವೆ’’ ಎಂದು ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಜಿಯೋಸಯನ್ಸಸ್‌ನ ಡಾ. ಸ್ಟೀವ್ ಬ್ರೂಸಟ್ ತಿಳಿಸಿದರು.
‘‘ಈ ಹೊಸ ತಾಣದಲ್ಲಿ ಎರಡು ಭಿನ್ನ ರೀತಿಯ ಡೈನೊಸಾರ್‌ಗಳ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಒಂದು ಉದ್ದ ಕುತ್ತಿಗೆಯ ಬ್ರೊಂಟೊಸಾರಸ್ ಡೈನೊಸಾರಸ್‌ಗಳು ಮತ್ತು ಚೂಪು ಹಲ್ಲುಗಳ ಟಿ. ರೆಕ್ಸ್ ಡೈನೊಸಾರಸ್‌ಗಳು. ಈ ಡೈನೊಸಾರಸ್‌ಗಳು ಆಳವಿಲ್ಲದ ಸಮುದ್ರ ಖಾರಿಯಲ್ಲಿ ತಿರುಗಾಡುತ್ತಿದ್ದವು. ಆಗ ಸ್ಕಾಟ್‌ಲ್ಯಾಂಡ್ ಹೆಚ್ಚು ಶೀತಲ ವಾತಾವರಣ ಹೊಂದಿರಲಿಲ್ಲ. ಜಾಗತಿಕ ಮಟ್ಟದಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಲು ಅವುಗಳು ಆಗಷ್ಟೇ ಆರಂಭಿಸುತ್ತಿದ್ದವು’’ ಎಂದು ಅವರು ಹೇಳಿದರು.





