ಕಾವೇರಿ ಮಂಡಳಿ ರಚನೆಗೆ ಎಐಎಡಿಎಂಕೆ ಆಗ್ರಹ: ಲೋಕಸಭಾ ಕಲಾಪಕ್ಕೆ ಮತ್ತೆ ಅಡಚಣೆ

ಹೊಸದಿಲ್ಲಿ, ಎ.3: ಕಾವೇರಿ ಜಲನಿರ್ವಹಣಾ ಮಂಡಳಿಯನ್ನು ಶೀಘ್ರ ರಚಿಸಬೇಕೆಂದು ಆಗ್ರಹಿಸಿ ಎಐಎಡಿಎಂಕೆ ಸದಸ್ಯರು ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದ ಕಾರಣ ಲೋಕಸಭಾ ಕಲಾಪಕ್ಕೆ ಸತತ 19ನೆಯ ದಿನವೂ ಅಡ್ಡಿಯಾಗಿದ್ದು, ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಗಿದೆ.
ಮಂಗಳವಾರ ಸದನ ಸಮಾವೇಶಗೊಂಡಾಗ ಗೃಹ ಸಚಿವ ರಾಜನಾಥ್ ಸಿಂಗ್ ,ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಕುರಿತು ಸೋಮವಾರ ನಡೆದ ಪ್ರತಿಭಟನೆಯ ಬಗ್ಗೆ ಹೇಳಿಕೆ ನೀಡಲು ಮುಂದಾದರು. ಆದರೆ ಎಐಎಡಿಎಂಕೆ ಸದಸ್ಯರು ಕಾವೇರಿ ಜಲನಿರ್ವಹಣಾ ಮಂಡಳಿಯನ್ನು ಶೀಘ್ರ ರಚಿಸಬೇಕೆಂದು ಆಗ್ರಹಿಸಿ ಘೋಷಣೆ ಕೂಗುತ್ತಾ ಪ್ರತಿಭಟನೆ ಆರಂಭಿಸಿದಾಗ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು. ಮಧ್ಯಾಹ್ನ ಮತ್ತೆ ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ ಕೈಯಲ್ಲಿ ಭಿತ್ತಿಫಲಕ ಹಿಡಿದುಕೊಂಡಿದ್ದ ಎಐಎಡಿಎಂಕೆ ಸದಸ್ಯರು, ನಮಗೆ ನ್ಯಾಯ ಬೇಕು, ಕಾವೇರಿ ಜಲನಿರ್ವಹಣಾ ಮಂಡಳಿ ಶೀಘ್ರ ಸ್ಥಾಪಿಸಿ ಎಂದು ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗೆ ನುಗ್ಗಿದರು.( ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಕಾವೇರಿ ಜಲನಿರ್ವಹಣಾ ಮಂಡಳಿ ಸ್ಥಾಪನೆಗೆ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿಕೊಂಡಿದೆ). ಆದರೆ ಕಾಂಗ್ರೆಸ್,ಎನ್‌ಸಿಪಿ, ಟಿಡಿಪಿ ಹಾಗೂ ಆರ್‌ಜೆಡಿ ಸದಸ್ಯರು ಸ್ವಸ್ಥಾನದಲ್ಲಿ ನಿಂತುಕೊಂಡು , ಸರಕಾರದ ವಿರುದ್ಧದ ಅವಿಶ್ವಾಸ ಗೊತ್ತುವಳಿ ನೋಟಿಸ್ ಬಗ್ಗೆ ಸ್ಪೀಕರ್ ಆದೇಶ ನೀಡಬೇಕೆಂದು ಒತ್ತಾಯಿಸಿದರು.
ಈ ಹಂತದಲ್ಲಿ ಸ್ವಸ್ಥಾನಕ್ಕೆ ಮರಳುವಂತೆ ಎಐಎಡಿಎಂಕೆ ಸದಸ್ಯರಿಗೆ ಸ್ಪೀಕರ್ ಮನವಿ ಮಾಡಿದರು. ಅವಿಶ್ವಾಸ ಗೊತ್ತುವಳಿ ನೋಟಿಸ್ ಅಂಗೀಕಾರಕ್ಕೆ ಮೊದಲು ಗೊತ್ತುವಳಿ ಬೆಂಬಲಿಸುವ ಸದಸ್ಯರ ತಲೆಎಣಿಕೆ ಮಾಡಬೇಕಿದೆ. ಸದನದಲ್ಲಿ ಸುವ್ಯವಸ್ಥೆ ನೆಲೆಸಿದರೆ ಮಾತ್ರ ಇದು ಸಾಧ್ಯ ಎಂದು ಸ್ಪೀಕರ್ ಮಾಡಿಕೊಂಡ ಮನವಿಗೆ ಎಐಎಡಿಎಂಕೆ ಸದಸ್ಯರು ಕಿವಿಗೊಡಲಿಲ್ಲ. ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯ, ವಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಬಗ್ಗೆ ಹಾಗೂ ಎಸ್/ಎಸ್‌ಟಿ ಕಾಯ್ದೆ ದುರ್ಬಲಗೊಳಿಸಲಾಗಿರುವ ಬಗ್ಗೆ ಚರ್ಚೆ ನಡೆಯಲು ಬಯಸುತ್ತಿವೆ ಎಂದರು.
ಇದಕ್ಕೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್, ಸರಕಾರ ಯಾವುದೇ ವಿಷಯದ ಬಗ್ಗೆಯೂ ಚರ್ಚೆಗೆ ಸಿದ್ಧವಿದೆ ಎಂದು ಹೇಳಿದರು. ಚರ್ಚೆ ನಡೆಯಬೇಕೆಂದು ನಾವು ಹೇಳುತ್ತಲೇ ಬಂದಿದ್ದೇವೆ. ಆದರೆ ಕಳೆದ 15 ದಿನದಿಂದ ಕಾಂಗ್ರೆಸ್ ಕಲಾಪಕ್ಕೆ ತಡೆಯೊಡ್ಡುತ್ತಾ ಬಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ತಡೆಯೊಡ್ಡಲು ಕಾಂಗ್ರೆಸ್ ನಡೆಸುತ್ತಿರುವ ಪ್ರಯತ್ನ ಸ್ವೀಕಾರಾರ್ಹವಲ್ಲ ಎಂದು ಅನಂತ್‌ಕುಮಾರ್ ಹೇಳಿದರು. ವಿಪಕ್ಷ ಸದಸ್ಯರು ತಮ್ಮ ಸ್ವಸ್ಥಾನಕ್ಕೆ ಮರಳಿದರೂ, ಎಐಎಡಿಎಂಕೆ ಸದಸ್ಯರು ಘೋಷಣೆ ಕೂಗುವುದನ್ನು ಮುಂದುವರಿಸಿದಾಗ ಸ್ಪೀಕರ್ ಸದನವನ್ನು ದಿನದ ಮಟ್ಟಿಗೆ ಮುಂದೂಡಿದರು.







