ಶ್ರಮಶಕ್ತಿ ಯೋಜನೆ ರಾಜಕೀಯ ಲಾಭಕ್ಕೆ ದುರುಪಯೋಗ: ಶೋಭಾ ಕರಂದ್ಲಾಜೆ

ಬೆಂಗಳೂರು, ಎ.3: ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಶ್ರಮ ಶಕ್ತಿ ಯೋಜನೆಯಡಿಯಲ್ಲಿ ಕಾಂಗ್ರೆಸ್‌ನ 94 ಶಾಸಕರ ಕ್ಷೇತ್ರಗಳಿಗೆ ಪ್ರತಿ ಕ್ಷೇತ್ರಕ್ಕೆ ತಲಾ 18.75 ಲಕ್ಷ ರೂ.ಗಳಂತೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಮಂಗಳವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 224 ಕ್ಷೇತ್ರಗಳಿರುವ ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ ಮಾತ್ರ ಈ ಅನುದಾನ ಬಿಡುಗಡೆ ಮಾಡಿರುವುದರ ಹಿಂದೆ ಕೇವಲ ಚುನಾವಣೆಯಲ್ಲಿ ಲಾಭ ಪಡೆಯುವುದು ಬಿಟ್ಟರೆ, ಬೇರೆ ಯಾವುದೆ ಸದುದ್ದೇಶವಿಲ್ಲ ಎಂದರು.
ಶ್ರಮಶಕ್ತಿ ಯೋಜನೆಯಡಿಯಲ್ಲಿ ಅರ್ಜಿದಾರರಿಂದ ನಿಯಮಾನುಸಾರ ದಾಖಲಾತಿಯನ್ನು ಪಡೆದು ಯಾರು ಅರ್ಹರಿದ್ದಾರೋ ಅವರ ಹೆಸರುಗಳನ್ನು ನಿಗಮವೇ ಶಿಫಾರಸ್ಸು ಮಾಡಬೇಕು. ಆ ಪಟ್ಟಿಯನ್ನು ಅನುಮೋದಿಸುವುದಷ್ಟೇ ಶಾಸಕರ ಕೆಲಸ ಎಂದು ಅವರು ಹೇಳಿದರು. ಆದರೆ, ಈ ಆದೇಶ ಗಮನಿಸಿದಾಗ ನಿಗಮದ ಜಿಲ್ಲಾ ವ್ಯವಸ್ಥಾಪಕರು ಮಾಡಬೇಕಾದ ಫಲಾನುಭವಿಗಳ ಆಯ್ಕೆಯನ್ನು ಶಾಸಕರಿಗೆ ಬಿಡಲಾಗಿದೆ. ಮುಂದಿನ ಚುನಾವಣೆಯಲ್ಲಿ ಲಾಭ ದೊರೆಯುವಂತಹ ವ್ಯಕ್ತಿಗಳನ್ನು ಫಲಾನುಭವಿಗಳಾಗಿ ಆಯ್ಕೆಮಾಡುವುದೆ ಇದರ ಹಿಂದಿರುವ ಉದ್ದೇಶ ಎಂದು ಶೋಭಾ ಕರಂದ್ಲಾಜೆ ದೂರಿದರು.
ಫಲಾನುಭವಿಗಳನ್ನು 94 ಶಾಸಕರು ಯಾವ ಅರ್ಹತೆ ಇಲ್ಲವೇ ಮಾನದಂಡದ ಮೇಲೆ ಆಯ್ಕೆ ಮಾಡಿದ್ದಾರೆ ? ಯಾವ ದಾಖಲಾತಿಗಳನ್ನು ಪರಿಶೀಲಿಸಲಾಗಿದೆ ಎಂಬುದನ್ನು ಅಲ್ಪಸಂಖ್ಯಾತರ ಇಲಾಖೆ ಸ್ಪಷ್ಟಪಡಿಸಬೇಕು. ಒಟ್ಟಾರೆ, ಶ್ರಮ ಶಕ್ತಿ ಯೋಜನೆಯನ್ನು ಕಾಂಗ್ರೆಸ್ ಸರಕಾರ ರಾಜಕೀಯ ಲಾಭಕ್ಕೆ ಅಲ್ಪಸಂಖ್ಯಾತರ ಓಲೈಕೆಗಾಗಿ ದುರುಪಯೋಗ ಮಾಡಿಕೊಂಡಿರುವುದು ದುರಾದೃಷ್ಟಕರ ಸಂಗತಿ ಎಂದು ಅವರು ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬದ್ಧ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರಿಗೆ ಮೋಸ ಮಾಡಿರುವುದು ದುರ್ದೈವದ ಸಂಗತಿ. ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡುವುದರಲ್ಲಿ ಕಾಂಗ್ರೆಸ್ ಸರಕಾರ ನಿಸ್ಸೀಮ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಇದೂ ಸಹ ಮತ್ತೊಂದು ಅಂತಹುದೇ ಹಣ ದುರುಪಯೋಗ ಕ್ರಮವಾಗಿದೆ. ಈ ಅನುದಾನ ಬಿಡುಗಡೆಗೆ ಚುನಾವಣೆ ಆಯೋಗವು ತಕ್ಷಣ ತಡೆ ನೀಡಬೇಕು ಹಾಗೂ ಸೂಕ್ತ ತನಿಖೆಗೆ ಆದೇಶಿಸಬೇಕು ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.







