ಮಗಳನ್ನು ಪರೀಕ್ಷೆಗೆ ಕಳುಹಿಸಿ ಪ್ರಾಣಬಿಟ್ಟ ಅಪ್ಪ !

ಮದ್ದೂರು, ಎ.3: ಎದೆ ನೋವಿನಿಂದ ಬಳಲುತ್ತಿದ್ದ ತಂದೆಯ ಸಲಹೆಯಂತೆ ಎಸೆಸೆಲ್ಸಿ ಪರೀಕ್ಷೆ ಬರೆಯಲು ಹೋದ ಮಗಳು, ಪರೀಕ್ಷೆ ಬರೆದು ಹಿಂತಿರುಗುವ ವೇಳೆಗೆ ತಂದೆಯನ್ನು ಕಳೆದುಕೊಂಡ ಘಟನೆ ತಾಲೂಕಿನ ಚಾಮನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಕ್ಯಾತೇಗೌಡನ ಮಗ ತ್ಯಾಗರಾಜು(53)ಗೆ ಸೋಮವಾರ ಬೆಳಗ್ಗೆ ಹೃದಯಾಘಾತವಾಗಿದೆ. ಇದರಿಂದ ಆತಂಕಗೊಂಡ ಪುತ್ರಿ ಸಿ.ಟಿ.ದರ್ಶಿನಿಯನ್ನು ತನಗೇನು ಆಗುವುದಿಲ್ಲವೆಂದು ಧೈರ್ಯ ತುಂಬಿ ಪರೀಕ್ಷೆ ಬರೆಯಲು ಕಳುಹಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
'ನಿನ್ನೆ ಬೆಳಗ್ಗೆ 8 ಗಂಟೆ ಸಮಯದಲ್ಲಿ ನಮ್ಮ ತಂದೆಗೆ ಎದೆ ನೋವು ಕಾಣಿಸಿಕೊಂಡು ನರಳುತ್ತಿದ್ದರು. ಆಸ್ಪತ್ರೆಗೆ ಹೋಗಲು ಮನೆಯಲ್ಲಿ ಸಿದ್ದವಾಗುತ್ತಿದ್ದರು. ಈ ಸಂದರ್ಭದಲ್ಲಿ ನಮ್ಮ ತಂದೆ 'ಯಾವುದೇ ಕಾರಣಕ್ಕೂ ನೀನು ಪರೀಕ್ಷೆ ತಪ್ಪಿಸಿಕೊಳ್ಳಬಾರದು. ವರ್ಷದಿಂದ ಪಟ್ಟ ಶ್ರಮ ವ್ಯರ್ಥ ಆಗಬಾರದು. ವಿಜ್ಞಾನದ ಪರೀಕ್ಷೆ ಇರುವುದರಿಂದ ಹೋಗಿ ಚೆನ್ನಾಗಿ ಬರೆದು ಬಾ. ನಾನು ಗುಣಮುಖನಾಗಿರುತ್ತೇನೆ ಎಂದು ಬಲವಂತವಾಗಿ ನಮ್ಮ ತಂದೆ ಕಳುಹಿಸಿದರು. ಪರೀಕ್ಷೆ ಬರೆದು ಬರುವಷ್ಟರಲ್ಲಿ ನನ್ನ ಪ್ರೀತಿಯ ತಂದೆ ಇಹಲೋಕ ತ್ಯಜಿಸಿದ್ದರು ಎಂದು ದರ್ಶಿನಿ ಕಣ್ಣೀರಿಟ್ಟಳು.





