ಗಂಗಾಮತ ಸಮುದಾಯಕ್ಕೆ ಟಿಕೆಟ್ ನೀಡಲು ಒತ್ತಾಯ
ಬೆಂಗಳೂರು, ಎ.4: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ಗಂಗಾ ಮತಸ್ಥ ಸಮುದಾಯದವರಿಗೆ ರಾಜಕೀಯ ಪ್ರಾತಿನಿಧ್ಯ ನೀಡಿ, ಜನಾಂಗದ ಪ್ರಾಬಲ್ಯ ಹೊಂದಿರುವ 18 ವಿಧಾನಸಭಾ ಕ್ಷೇತ್ರಗಳಲ್ಲಿ ಸಮುದಾಯದವರಿಗೆ ಟಿಕೆಟ್ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ಅಖಿಲ ಕರ್ನಾಟಕ ಅಂಬಿಗರ ಚೌಡಯ್ಯ ಮಹಾಸಭಾ ಒತ್ತಾಯಿಸಿದೆ.
ಬುಧವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ರಾಜ್ಯಾಧ್ಯಕ್ಷೆ ಅಂಬಿಕಾ ಜಲಗಾರ, ರಾಜ್ಯದಲ್ಲಿ ಗಂಗಾಮತ ಸಮುದಾಯದ ಒಳಪಂಗಡಗಳಾದ ಅಂಬಿಗ, ಬೆಸ್ತ, ಕೋಲಿ, ಕಬ್ಬಲಿಗ, ಮೊಗವೀರ, ತಳವೀರ ಸೇರಿದಂತೆ 39 ಒಳಪಂಗಡಗಳಿದ್ದು, 40 ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರಿದ್ದಾರೆ. ಹೀಗಿದ್ದರೂ ಸಹ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳು ನಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಲು ಮುಂದಾಗಿಲ್ಲ. ಹೀಗಾಗಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸಮುದಾಯಕ್ಕೆ ಟಿಕೆಟ್ ನೀಡುವ ಪಕ್ಷವನ್ನು ಬೆಂಬಲಿಸುವುದಾಗಿ ತಿಳಿಸಿದರು.
ಬಸವಕಲ್ಯಾಣ, ಸೇಡಂ, ಅಫಜಲಪೂರ, ಗುರುಮಿಠಕಲ್, ದೇವರಹಿಪ್ಪರಗಿ, ಬಬಲೇಶ್ವರ, ಬಾಗಲಕೋಟೆ, ಹರಿಹರ, ಹಾನಗಲ್, ಕಾರವಾರ, ಉಡುಪಿ, ಕಾಪು, ಮಂಗಳೂರು, ಚನ್ನಪಟ್ಟಣ, ಹಾಗೂ ಶ್ರೀರಂಗಪಟ್ಟಣ ಕ್ಷೇತ್ರಗಳಲ್ಲಿ ಗಂಗಾಮತ ಸಮುದಾಯದ ನಾಯಕರಿಗೆ ಟಿಕೆಟ್ ನೀಡಬೇಕೆಂದು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ರಾಜ್ಯ ಕಾರ್ಯದರ್ಶಿ ಪ್ರಕಾಶ್ ತಲಾರಿ, ಬೆ.ನ.ಜಿಲ್ಲಾಧ್ಯಕ್ಷ ಬಸವರಾಜ ಜಾಲಗಾರ್ ಸೇರಿದಂತೆ ಪ್ರಮುಖರಿದ್ದರು.