ಬುರ್ಹಾನ್ ವಾನಿಯನ್ನು ವೈಭವೀಕರಿಸುವ ಕಾರ್ಯಕ್ರಮಕ್ಕೆ ವಿರೋಧ: ಭಾರತ

ಲಂಡನ್, ಎ. 6: ಹಿಝ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿಯನ್ನು ವೈಭವೀಕರಿಸುವ ಯಾವುದೇ ಕಾರ್ಯಕ್ರಮವು ಬ್ರಿಟನ್‌ನಲ್ಲಿ ನಡೆಯುವುದಕ್ಕೆ ತನ್ನ ‘ಗಂಭೀರ ಆಕ್ಷೇಪ’ವನ್ನು ಭಾರತ ಗುರುವಾರ ಪುನರುಚ್ಚರಿಸಿದೆ.
2016ರ ಜುಲೈಯಲ್ಲಿ ವಾನಿಯ ಹತ್ಯೆಯಾದ ಬಳಿಕ ಸುದೀರ್ಘ ಅವಧಿಗೆ ಕಾಶ್ಮೀರ ಕಣಿವೆಯಲ್ಲಿ ಅಶಾಂತಿ ನೆಲೆಸಿತ್ತು.
ಬರ್ಮಿಂಗ್‌ಹ್ಯಾಮ್‌ನಲ್ಲಿ ಕಳೆದ ವರ್ಷದ ಜುಲೈಯಲ್ಲಿ ವಾನಿ ಹತ್ಯೆ ದಿನವನ್ನು ಆಚರಿಸುವ ಕಾರ್ಯಕ್ರಮವೊಂದನ್ನು ಸಂಘಟನೆಯೊಂದು ಹಮ್ಮಿಕೊಂಡಿತ್ತು. ಇದನ್ನು ವಿರೋಧಿಸಿ ಭಾರತವು ಬ್ರಿಟನ್ ವಿದೇಶ ಸಚಿವಾಲಯಕ್ಕೆ ಪತ್ರ ಬರೆದ ಬಳಿಕ, ಸ್ಥಳೀಯ ಪುರಸಭೆಯು ಆ ಕಾರ್ಯಕ್ರಮಕ್ಕೆ ನೀಡಿದ ಅನುಮತಿಯನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಆದಾಗ್ಯೂ, ಬಳಿಕ ಪುರಸಭೆಯು ಅದಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆದಿತ್ತು.
‘‘ರಾಜಕೀಯ ವಿಷಯಗಳಲ್ಲಿ ಶಾಂತಿಯುತ ಕಾರ್ಯಕ್ರಮಗಳು ನಡೆದರೆ ನಮ್ಮದೇನೂ ಆಕ್ಷೇಪವಿಲ್ಲ. ಆದರೆ, ಭಯೋತ್ಪಾದಕರನ್ನು ವೈಭವೀಕರಿಸುವ ಯಾವುದೇ ಪ್ರಯತ್ನಗಳಿಗೆ ನಾವು ಗಂಭೀರ ಆಕ್ಷೇಪ ಹೊಂದಿದ್ದೇವೆ’’ ಎಂದು ಬ್ರಿಟನ್‌ಗೆ ಭಾರತದ ಉಪ ಹೈಕಮಿಶನರ್ ದಿನೇಶ್ ಪಟ್ನಾಯಕ್ ಹೇಳಿದರು.
ಈ ವರ್ಷವೂ ಕಳೆದ ವರ್ಷದ ಮಾದರಿಯಲ್ಲೇ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ ಎಂಬ ವರದಿಗಳಿಗೆ ಅವರು ಪ್ರತಿಕ್ರಿಯೆ ನೀಡುತ್ತಿದ್ದರು.
‘‘ಕಳೆದ ವರ್ಷ ವೆಸ್ಟ್‌ಮಿನ್‌ಸ್ಟರ್ ಸೇತುವೆಯಲ್ಲಿ ದಾಳಿ ನಡೆಸಿದ ವ್ಯಕ್ತಿಯಂಥ ಭಯೋತ್ಪಾದಕರನ್ನು ವೈಭವೀಕರಿಸುವ ಕಾರ್ಯಕ್ರಮಗಳಿಗೆ ಯಾವುದಾದರೂ ಪುರಸಭೆ ಅನುಮತಿ ನೀಡುವುದೇ’’ ಎಂದು ಅವರು ಪ್ರಶ್ನಿಸಿದರು.
ಬ್ರಿಟಿಶ್ ಸಂಸತ್ತಿನ ಪಕ್ಕದ ವೆಸ್ಟ್‌ಮಿನ್‌ಸ್ಟರ್ ಸೇತುವೆಯಲ್ಲಿ ಮರ್ಚ್ 22ರಂದು ನಡೆದ ದಾಳಿಯಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದರು.







