ಮೂವರ ಪ್ರಾಣ ಉಳಿಸಿದ ಕೊಕ್ಕಡದ ಯುವಕರು: ದ.ಕ.ಜಿಲ್ಲಾ ಎಸ್ಪಿಯಿಂದ ಪ್ರಶಂಸೆ

ಮಂಗಳೂರು, ಎ.7: ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೈಯಲು ಮುಂದಾಗಿದ್ದ ಮಹಿಳೆಯನ್ನು ರಕ್ಷಿಸಿದ ಕೊಕ್ಕಡ ಬೋಳದ ಬೈಲು ರಫೀಕ್ ಮತ್ತು ಅಝೀಝ್ ಎಂಬವರಿಗೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ರವಿಕಾಂತೇ ಗೌಡ ಶನಿವಾರ ಪ್ರಶಂಸಾ ಪತ್ರ ನೀಡಿ ಪುರಸ್ಕರಿಸಿದರು.
ಎ. 4ರಂದು ಬೆಂಗಳೂರಿನ ರಾಮನಗರ ಮೂಲದ ಚಂದ್ರಕಲಾ ತನ್ನ ಇಬ್ಬರು ಪುತ್ರಿಯರ ಜೊತೆನ ಧರ್ಮಸ್ಥಳಕ್ಕೆ ಬರುವ ಬಸ್ಸಿನಲ್ಲಿ ಬರುತ್ತಾ ತಾವು ತಮ್ಮ ಮನೆಯಲ್ಲಿ ಪತಿಯ ಹೆತ್ತವರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಗೈಯುವ ನಿರ್ಧಾರ ಮಾಡಿ ಬಂದಿರುವುದನ್ನು ಅದೇ ಬಸ್ಸಿನ ಪಕ್ಕದ ಸೀಟಿನಲ್ಲಿದ್ದ ಕೊಕ್ಕಡದ ಈ ಇಬ್ಬರು ಯುವಕರು ಅರಿತು ನಂತರ ಮಹಿಳೆಗೆ ಧೈರ್ಯ ಹೇಳಿ, ಎಸ್ಪಿ ಅವರಿಗೆ ವಿಷಯ ತಿಳಿಸಿದ್ದರು.
ಬಸ್ಸು ಧರ್ಮಸ್ಥಳ ತಲುಪುತ್ತಿದ್ದಂತೆ ಎಸ್ಪಿಯವರ ಆದೇಶದಂತೆ ಧರ್ಮಸ್ಥಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವಿನಾಶ್ ಅವರು ಈ ಮೂವರನ್ನು ಪೊಲೀಸ್ ಜೀಪಲ್ಲಿ ಠಾಣೆಗೆ ಕರೆಸಿ ನಂತರ ಮಹಿಳೆಯ ಪತಿಯನ್ನು ಮರುದಿನ ಕರೆಸಿ, ಸಾಂತ್ವನ ಹೇಳಿ ಪತಿಯೊಂದಿಗೆ ಕಳುಹಿಸಲಾಗಿತ್ತು.
ಈ ಮೂವರ ಪ್ರಾಣವುಳಿಸಿದ್ದಕ್ಕಾಗಿ ಕೊಕ್ಕಡದ ಯುವಕರನ್ನು ಜಿಲ್ಲಾ ಎಸ್ಪಿ ಅವರು ಇಲಾಖಾವತಿಯಿಂದ ಪ್ರಶಂಸಾ ಪತ್ರ ನೀಡಿ ಪುರಸ್ಕರಿಸಿದರು.





