ಸ್ಪೂರ್ತಿಧಾಮ ಸರಕಾರದ ಅನುದಾನ, ಪರವಾನಿಗೆಯನ್ನು ನಂಬಿಲ್ಲ: ಕೇಶವ ಕೋಟೇಶ್ವರ
ಉಡುಪಿ, ಎ.7: ಮಹಾಬಲ ಕುಂದರ್ ಮತ್ತು ರಾಮ ಪೂಜಾರಿ ಎಂಬವರು ಕೆದೂರು ಸ್ಪೂರ್ತಿಧಾಮದ ವಿರುದ್ಧ ನೀಡಿದ ಆರೋಪದ ಹಿನ್ನೆಲೆಯಲ್ಲಿ ಸರಕಾರ ಸಂಸ್ಥೆಯ ಮಾನ್ಯತೆ ರದ್ದುಪಡಿಸುವ ಆದೇಶ ನೀಡಿದೆ. ಈ ಸಂಸ್ಥೆಯನ್ನು ಸರಕಾರದ ಅನುದಾನ ಅಥವಾ ಪರವಾನಿಗೆಗಳನ್ನು ನಂಬಿ ಆರಂಭಿಸಿಲ್ಲ. ಇಲ್ಲಿ ರುವ ಫಲಾನುಭವಿಗಳನ್ನು ಸರಕಾರ ಸ್ಥಳಾಂತರಿಸಿದರೂ ನಾವು ತಡೆಯುವುದಿಲ್ಲ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವ ಕೋಟೇಶ್ವರ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೂರುದಾರರ ಆರೋಪ ಬಾಲಿಷ ಹಾಗೂ ಹೇಯವಾಗಿದ್ದು, ಜಿಲ್ಲಾಡಳಿತವು ತನಿಖೆಯ ಸಂದರ್ಭದಲ್ಲಿ ಸಂಸ್ಥೆಗೆ ಸಂಬಂಧಪಟ್ಟ ಯಾರನ್ನೂ ಕೂಡ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದರು.
ಸಂಸ್ಥೆಯ ವಿರುದ್ಧ ಆರೋಪಗಳ ಕುರಿತು ಜಿಲ್ಲಾಡಳಿತಕ್ಕೆ ವಿವರವಾದ ಸ್ಪಷ್ಟನೆ ನೀಡಲಾಗಿದೆ. ಆದರೂ ಸಂಸ್ಥೆಯ ಮಾನ್ಯತೆ ರದ್ದುಪಡಿಸುವ ಆದೇಶ ನೀಡಿ ರುವುದು ಯಾಕೆ ಎಂಬುದು ತಿಳಿದಿಲ್ಲ. ಸಂಸ್ಥೆಗೆ ವಿರುದ್ಧವಾಗಿರುವ ನಾಲ್ಕಾರು ಮಂದಿ ಹೇಳಿಕೆಯನ್ನು ಆಧರಿಸಿ ಜಿಲ್ಲಾಡಳಿತ ಸಂಸ್ಥೆಯ ವಿರುದ್ಧ ಸರಕಾರಕ್ಕೆ ವರದಿ ನೀಡಿದೆ ಎಂದು ಅವರು ದೂರಿದರು.
ಸ್ಪೂರ್ತಿಧಾಮ ಹಾಗೂ ನನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿದ್ದು, ಇದರ ವಿರುದ್ಧ ಸೈಬರ್ ಕ್ರೈಮ್‌ಗೆ ಎ.3ರಂದು ದೂರು ನೀಡಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅನಘಾ ಹಿರಿಯ ನಾಗರಿಕರ ನಿರ್ವಹಣಾ ಸಮಿತಿಯ ಅಧ್ಯಕ್ಷ ಇ.ಎಸ್.ಅಂಬ್ಲರ್, ಮಾಜಿ ಅಧ್ಯಕ್ಷ ಶೀನ ಭಂಡಾರಿ, ಮಹಾಬಲ, ಕೃಷ್ಣ ನಾಯ್ಕಿ ಉಪಸ್ಥಿತರಿದ್ದರು.







