ಬೆಂಗಳೂರು: ರಾಜರಾಜೇಶ್ವರಿನಗರ ಟಿಕೆಟ್‌ಗಾಗಿ ದೇವೇಗೌಡರ ಕಾರಿಗೆ ಪ್ರಜ್ವಲ್ ಅಭಿಮಾನಿಗಳ ಮುತ್ತಿಗೆ
ಬೆಂಗಳೂರು, ಎ. 7: ಮಾಜಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರಿಗೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕಾರಿಗೆ ಮುತ್ತಿಗೆ ಹಾಕಿದ ಪ್ರಸಂಗ ನಡೆಯಿತು.
ಶನಿವಾರ ಇಲ್ಲಿನ ಪದ್ಮನಾಭನಗರದಲ್ಲಿನ ದೇವೇಗೌಡರ ನಿವಾಸಕ್ಕೆ ಆಗಮಿಸಿದ ಪ್ರಜ್ವಲ್ ರೇವಣ್ಣ ಅವರ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು, ರಾಜರಾಜೇಶ್ವರಿ ನಗರದ ಟಿಕೆಟ್ ಪ್ರಜ್ವಲ್‌ಗೆ ನೀಡಬೇಕೆಂದು ಪಟ್ಟು ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ. ನೂರಾರು ಮಂದಿ ಕಾರ್ಯಕರ್ತರು ಪ್ರಜ್ವಲ್ ಪರ ಭಿತ್ತಪತ್ರಗಳನ್ನು ಹಿಡಿದು ರಾಜರಾಜೇಶ್ವರಿ ನಗರ ಕ್ಷೇತ್ರದ ಟಿಕೆಟ್ ಪ್ರಜ್ವಲ್‌ಗೆ ನೀಡಿದರೆ ಜೆಡಿಎಸ್ ಗೆಲುವು ನಿಶ್ಚಿತ. ಆದುದರಿಂದ ಪಕ್ಷದಿಂದ ಬೇರೆಯವರಿಗೆ ಟಿಕೆಟ್ ನೀಡದೆ, ಪ್ರಜ್ವಲ್ ಅವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದ್ದಾರೆ.
ಈ ವೇಳೆ ಪ್ರಜ್ವಲ್ ಅಭಿಮಾನಿಗಳು-ಕಾರ್ಯಕರ್ತರನ್ನು ಸಮಾಧಾನಪಡಿಸಲು ವಿಧಾನ ಪರಿಷತ್ ಸದಸ್ಯ ಟಿ.ಎ.ಸರವಣ ಪ್ರಯತ್ನಿಸಿದರೂ ಅದು ಯಾವುದೇ ಫಲ ನೀಡಲಿಲ್ಲ. ದೇವೇಗೌಡ ಕೆಲಕಾಲ ಕಾರಿನಲ್ಲೆ ಉಳಿದರು. ಅನಂತರ ಪ್ರತಿಕ್ರಿಯೆ ನೀಡದ ದೇವೇಗೌಡ, ರಾಜಾಧ್ಯಕ್ಷ ಕುಮಾರಸ್ವಾಮಿಯೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದ್ದಾರೆಂದು ಗೊತ್ತಾಗಿದೆ.
ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ಮುನಿರತ್ನ ಅವರಿಗೆ ಪ್ರಬಲ ಪೈಪೋಟಿ ನೀಡಲು ಪ್ರಜ್ವಲ್ ಅವರಿಗೆ ಜೆಡಿಎಸ್ ಟಿಕೆಟ್ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.







