ಬಂಟ್ವಾಳ ಪುರಸಭಾ ವ್ಯಾಪ್ತಿಯ 8ನೆ ವಾರ್ಡ್ ಡ್ರೈನೇಜ್ ಒಳಚರಂಡಿ ಕಾಮಗಾರಿ ಪುನರಾರಂಭ
'ವಾರ್ತಾಭಾರತಿ' ವರದಿ ಫಲಶ್ರುತಿ
.jpg)
ಪುನರಾರಂಭಗೊಂಡ ಒಳಚರಂಡಿ ಕಾಮಗಾರಿ
ಬಂಟ್ವಾಳ, ಎ. 7: ಬಂಟ್ವಾಳ ಪುರಸಭಾ ವ್ಯಾಪ್ತಿಯ 8ನೆ ವಾರ್ಡ್ನಲ್ಲಿ ಡ್ರೈನೇಜ್ ಒಳಚರಂಡಿ ಸಮಸ್ಯೆಗೆ ಈ ಬಾರಿ ಮುಕ್ತಿ ಸಿಕ್ಕಿದ್ದು, 'ವಾರ್ತಾಭಾರತಿ' ವರದಿ ಫಲಶ್ರುತಿಯಿಂದ ಒಳಚರಂಡಿ ಕಾಮಗಾರಿ ಪುನರಾರಂಭಗೊಂಡಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ 8ನೆ ವಾರ್ಡ್ನಲ್ಲಿ ಡ್ರೈನೇಜ್ ಒಳಚರಂಡಿಗಳಲ್ಲಿ ಕೊಳಚೆ ನೀರು ಹರಿಯದೇ ಚರಂಡಿಯಲ್ಲಿಯೇ ನಿಂತು ಪರಿಸವಿಡೀ ದುರ್ನಾತ ಬೀರುತ್ತಿತ್ತು. ಇದರಿಂದ ಪುರವಾಸಿಗಳು ಆತಂಕಗೊಂಡಿದ್ದು, ಗಂಭೀರ ಅನಾರೋಗ್ಯ ಭೀತಿ ಎದುರಿಸುತ್ತಿದ್ದರು.
ಈ ಒಳಚರಂಡಿ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದರೂ ಕಾಮಗಾರಿ ಪ್ರಾರಂಭವಾಗಿರಲಿಲ್ಲ. ಇದಕ್ಕಾಗಿ ಪುರಸಭೆಯಿಂದ ಸುಮಾರು 4 ಲಕ್ಷ ರೂ. ಅನುದಾನವನ್ನು ಮೀಸಲಿಡಲಾಗಿತ್ತು. ಅಲ್ಲದೆ, ಕಾಮಗಾರಿಗೆ ಬೇಕಾದಂತಹ ಸಲಕರಣೆಗಳು ಬಂದಿದ್ದರೂ, ಕೆಲಸ ಪ್ರಾರಂಭವಾಗದೇ ನೆನಗುದಿಗೆ ಬಿದ್ದಿತ್ತು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ತಂದಿದ್ದರೂ, ಕೆಲವೊಂದು ತಾಂತ್ರಿಕ ದೋಷದಿಂದ ಕಾಮಗಾರಿ ಸ್ಥಗಿತಗೊಂಡಿತ್ತು.
ಈ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದ್ದರು. ಸಮಸ್ಯೆಯ ಗಂಭೀರತೆಯನ್ನು ಅರಿತು ಸ್ಥಳೀಯ ಒತ್ತಾಯದ ಮೇರೆಗೆ "ವಾರ್ತಾಭಾರತಿ" ಪತ್ರಿಕೆ ವಿಶೇಷ ವರದಿ ಪ್ರಕಟಿಸಿದ್ದು, ಇದರ ಫಲಶ್ರುತಿ ಎಂಬಂತೆ ಕಾಮಗಾರಿ ಮತ್ತೆ ಪ್ರಾರಂಭವಾಗಿದೆ.
ಈ ಸಮಸ್ಯೆ ಗಂಭೀರತೆಯನ್ನು ಪರಿಗಣಿಸಿ, ಒಳಚರಂಡಿಯ ಕಾಮಗಾರಿ ಮತ್ತೆ ಆರಂಭವಾಗಿದ್ದು, ಡ್ರೈನೇಜ್ ನೀರು ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಅಧಿಕಾರಿಗಳ ಕಣ್ಣು ತೆರೆಸಿದ ಪತ್ರಿಕೆಗೂ ಹಾಗೂ ಪುರಸಭಾ ಮುಖ್ಯಾಧಿಕಾರಿಗೂ ಧನ್ಯವಾದ ಹೇಳಲು ಬಯಸುತ್ತೇನೆ.
-ಸವಾಝ್, ಸ್ಥಳೀಯರು.
'ವಾರ್ತಾಭಾರತಿ' ವರದಿ ಫಲಶ್ರುತಿ
ಬಂಟ್ವಾಳ ಪುರಸಭಾ ವ್ಯಾಪ್ತಿಯ 8ನೆ ವಾರ್ಡ್ನಲ್ಲಿ ಡ್ರೈನೇಜ್ ಒಳಚರಂಡಿ ಸಮಸ್ಯೆಯ ಬಗ್ಗೆ 'ಬಂಟ್ವಾಳ ಚರಂಡಿ ನೀರಿನಿಂದ ರೋಗದ ಭೀತಿ' ಎಂಬ ಶೀಷಿಕೆಯಡಿ ಎ.4ರಂದು 'ವಾರ್ತಾಭಾರತಿ' ಪತ್ರಿಕೆಯಲ್ಲಿ ವಿಶೇಷ ವರದಿಯೊಂದನ್ನು ಪ್ರಕಟಿಸಿತ್ತು. ಪುರಸಭಾ ನಿವಾಸಿಗಳು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಈ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಇತರ ಅಧಿಕಾರಿಗಳ ಗಮನ ಸೆಳೆದಿತ್ತು. ಇದನ್ನು ಮನಗಂಡ ಅಧಿಕಾರಿಗಳು ಎ.6ರಂದು ಮತ್ತೆ ಒಳಚರಂಡಿ ಕಾಮಗಾರಿಗಳನ್ನು ಪ್ರಾರಂಭಿಸಿದ್ದು, ಶೀಘ್ರಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ.
ಅವ್ಯವಸ್ಥೆಯಿಂದ ಕೂಡಿದ್ದ ಒಳಚರಂಡಿ






.jpg)

