ಮತದಾನ ಖಾತ್ರಿಗೆ 7 ಸೆಕೆಂಡು ಅವಕಾಶ : ಮಂಗಳೂರು ಚುನಾವಣಾಧಿಕಾರಿ

ಮಂಗಳೂರು, ಎ. 7: ಈ ಬಾರಿ ಮತದಾರ ತಾನು ಯಾರಿಗೆ ಮತ ಹಾಕಿರುವುದಾಗಿ ಮತ್ತು ಅದನ್ನು ಪರಿಶೀಲಿಸಲು ಮತಗಟ್ಟೆಗಳಲ್ಲಿ ಇಲೆಕ್ಟ್ರಾನಿಕ್ ಮತ ಯಂತ್ರದೊಂದಿಗೆ ವಿವಿಪ್ಯಾಟ್ (ವೋಟರ್ ವೆರಿಫೈಯೇಬಲ್ ಪೇಪರ್ ಆಡಿಟ್ ಟ್ರಯೆಲ್) ಬಳಕೆಯ ಮೂಲಕ 7 ಸೆಕೆಂಡುಗಳ ಕಾಲ ಅವಕಾಶವಿದೆ ಎಂದು ಮಂಗಳೂರು 204 ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿ ಮಹೇಶ್ ಕರ್ಜಗಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಬಾರಿ ಮತ ಯಂತ್ರದ ಜೊತೆ ತಾನು ಹಾಕಿದ ಮತ ಸರಿಯಾಗಿ ಬಿದ್ದಿದೆಯೇ ಎಂದು ಪರಿಶೀಲಿಸಲು ಮತಗಟ್ಟೆಗೆ ತೆರಳಿ ಬಟನ್ ಒತ್ತಿದ ಬಳಿಕ ತಾನು ಯಾರಿಗೆ ಮತ ಹಾಕಿರುವುದಾಗಿ ಮುದ್ರಣಗೊಂಡ ಪತ್ರ ವಿವಿಪ್ಯಾಟ್ ನಲ್ಲಿ ದಾಖಲಾಗಿ ಮತದಾರನಿಗೆ ಸ್ಕ್ರೀನ್ ಮೂಲಕ 7 ಸೆಕೆಂಡುಗಳ ಕಾಣಿಸುತ್ತದೆ ಬಳಿಕ ಪತ್ರ ಪೆಟ್ಟಿಗೆ ಸೇರುತ್ತದೆ. ಮತದಾರನಿಗೆ ಹೊರತಾಗಿ ಬೇರೆ ಯಾರಿಗೂ ಇದು ಕಾಣದಂತೆ ವ್ಯವಸ್ಥೆ ಇರುತ್ತದೆ ಎಂದು ಮಹೇಶ್ ಕರ್ಜಗಿ ತಿಳಿಸಿದ್ದಾರೆ.
ಚುನಾವಣಾ ಸಭೆ ನಡೆಸಲು ಏಕ ಗವಾಕ್ಷಿ ವ್ಯವಸ್ಥೆ
ಚುನಾವಣಾ ಸಭೆ ನಡೆಸಲು ಅನುಮತಿ ಪಡೆಯಲು ಅನುಕೂಲವಾಗುವಂತೆ ಏಕ ಗವಾಕ್ಷಿ ವ್ಯವಸ್ಥೆಯನ್ನು ಮಾಡಲಾಗಿದೆ. ಕಾರ್ಯಕ್ರಮದ ಮುಂಚಿತವಾಗಿ 48 ಗಂಟೆಗಳ ಅವಧಿಯೊಳಗೆ ಸಭೆ ನಡೆಸುವ ಬಗ್ಗೆ ಅರ್ಜಿಸಲ್ಲಿಸಬೇಕಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಶುಭ ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ವ್ಯಕ್ತಿಗಳಿಗೆ ವೇದಿಕೆ ಕಲ್ಪಿಸಬೇಡಿ
ಚುನಾವಣಾ ಸಂದರ್ಭದಲ್ಲಿ ನಡೆಯುವ ಶುಭ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮ ನಡೆಸಲು ಯಾವೂದೇ ಸಮಸ್ಯೆ ಇಲ್ಲ. ಆದರೆ ಈ ಸಮಾರಂಭ ವನ್ನು ಯಾವೂದೇ ಪಕ್ಷದ ರಾಜಕೀಯ ವೇದಿಕೆಯಾಗಿ ಬಳಸಿಕೊಳ್ಳದಂತೆ ಕಾರ್ಯಕ್ರಮದ ಸಂಘಟಕರು ಎಚ್ಚರಿಕೆ ವಹಿಸಬೇಕಾಗುತ್ತದೆ. ಈ ಬಗ್ಗೆ ಚುನಾವಣಾ ಆಯೋಗವೂ ನಿಗಾ ವಹಿಸುತ್ತದೆ ಎಂದು ಮಹೇಶ್ ಕರ್ಜಗಿ ತಿಳಿಸಿದ್ದಾರೆ.
ಬಿಟ್ಟು ಹೋದ ಮತದಾರರ ಹೆಸರು ದಾಖಲಿಸಲು ಮಿಂಚಿನ ಕಾರ್ಯಾಚರಣೆ
ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋದವರು, ಕ್ಷೇತ್ರ ಬದಲಾಯಿಸಲು ಇಚ್ಚಿಸುವವರು, ಪಟ್ಟಿಯಿಂದ ತಮ್ಮ ಹೆಸರು ತೆಗೆಯಲು ಇಚ್ಚಿಸುವವರಿಗೆ ಅನುಕೂಲವಾಗುವಂತೆ ಎಪ್ರಿಲ್ 8ರಂದು ಎಲ್ಲಾ ಮತಗಟ್ಟೆಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಹೇಶ್ ಕರ್ಜಗಿ ತಿಳಿಸಿದ್ದಾರೆ.
ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ 210 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಮುಕ್ತ, ಪಾರದರ್ಶಕ ಹಾಗೂ ಸುರಕ್ಷಿತವಾಗಿ ಮತಚಲಾವಣೆಗೆ ಪೊಲೀಸರೊಂದಿಗೆ ಸಭೆ ನಡೆಸಲಾಗಿದೆ. ಕ್ಷೇತ್ರದ ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ ತಪಾಸಣೆ ನಡೆಸಲಾಗುತ್ತದೆ ಎಂದು ಮಹೇಶ್ ಕರ್ಜೆ ತಿಳಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಸರಕಾರದ ಸಾಧನೆಗಳ ಬಗ್ಗೆ ಅಧಿಕಾರಿಗಳು ಸಮಾವೇಶ ಮಾಡುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಯಾಗುತ್ತದೆ ಎಂದರು.
ಚುನಾವಣೆಯ ಸಂದರ್ಭದಲ್ಲಿ ತುರ್ತು ನಾಗರಿಕ ಸೇವೆಗಳ ಅಧಿಕಾರಿಗಳನ್ನು ಬಳಸಿಕೊಂಡಿಲ್ಲ
ಚುನಾವಣೆಯ ಸಂದರ್ಭದಲ್ಲಿ ಆರೋಗ್ಯ, ಕುಡಿಯುವ ನೀರು, ನೈರ್ಮಲ್ಯ ಸೇರಿಂದಂತೆ ತುರ್ತುನಾಗರಿಕ ಸೇವೆಗಳ ಅಧಿಕಾರಗಳ ಸೇವೆಗಳನ್ನು ಬಳಸಿಕೊಂಡಿಲ್ಲ. ಉಳಿದಂತೆ ಕೆಲವು ಸೌಲಭ್ಯಗಳಿಗೆ ಸಂಬಂಧಿಸಿದಂತೆ ಕೆಲವು ತೊಡಕುಗಳಾಗಿರಬಹುದು ನಾಗರಿಕರ ಮೂಲ ಭೂತ ಸೌಕರ್ಯಗಳನ್ನು ಪಡೆಯಲು ಯಾವೂದೇ ಸಮಸ್ಯೆ ಇಲ್ಲ ಎಂದು ಮಹೇಶ್ ಕರ್ಜಗಿ ತಿಳಿಸಿದ್ದಾರೆ.







