ಬಾಬಾಬುಡಾನ್‍ಗಿರಿ ವಿವಾದ: ಸುಪ್ರೀಂ ತೀರ್ಪಿನಿಂದ ಹಿಂದೂಗಳ ಭಾವನೆಗೆ ಧಕ್ಕೆ; ಶ್ರೀರಾಮಸೇನೆ
_0.jpg)
ಚಿಕ್ಕಮಗಳೂರು, ಎ.7: ಬಾಬಾಬುಡಾನ್‍ಗಿರಿ ಹಾಗೂ ದತ್ತಪೀಠಕ್ಕೆ ಸಂಬಂಧಿಸಿದಂತೆ ಶುಕ್ರವಾರ ದೇಶದ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ಒಪ್ಪಲು ಸಾಧ್ಯವಿಲ್ಲ. ಈ ತೀರ್ಪಿನಿಂದಾಗಿ ದೇಶದ ಬಹುಸಂಖ್ಯಾತ ಹಿಂದುಗಳ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದು, ಈ ತೀರ್ಪಿನ ಪುನರ್ ಪರಿಶೀಲನೆ ಆಗಬೇಕೆಂದು ಒತ್ತಾಯಿಸಿ ಶ್ರೀರಾಮಸೇನೆಯ ಜಿಲ್ಲಾ ಘಟಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಬಾಬಾಬುಡಾನ್‍ಗಿರಿ ಹಾಗೂ ದತ್ತಪೀಠ ಬೇರೆಬೇರೆಯಾಗಿದ್ದು, ಪ್ರತ್ಯೇಕ ಸರ್ವೇ ನಂಬರ್ ಗಳಲ್ಲಿವೆ. ಈ ಬಗ್ಗೆ ವರದಿ ಸಿದ್ಧಪಡಿಸಲು ರಾಜ್ಯ ಸರಕಾರ ನೇಮಿಸಿದ್ದ ನಾಗಮೋಹನ್‍ದಾಸ್ ಸಮಿತಿ ಏಕಪಕ್ಷೀಯವಾಗಿ ವರದಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಕಾರಣಕ್ಕೆ ಸುಪ್ರೀಂಕೋರ್ಟ್ ತೀರ್ಪು ಏಕಪಕ್ಷೀಯವಾಗಿ ಹೊರಬಂದಿದೆ. ದತ್ತಪೀಠದಲ್ಲಿ ಹಿಂದೂ ದೇವತೆಗಳಿಗೆ ಪೂಜೆ ಸಲ್ಲಿಸಲು ಮುಜಾವರ್ ಅವರನ್ನು ನೇಮಿಸಿರುವುದನ್ನು ಹಿಂದುಗಳು ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ದತ್ತಪೀಠದಲ್ಲಿ ಪೂಜೆ ಸಲ್ಲಿಸಲು ಹಿಂದೂ ಅರ್ಚಕರನ್ನೇ ನೇಮಿಸಲು ಸರಕಾರ ಕ್ರಮವಹಿಸಬೇಕೆಂದು ಅವರು ಮನವಿಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯ ಸರಕಾರ ನೇಮಿಸಿರುವ ನ್ಯಾ.ನಾಗಮೋಹನ್‍ದಾಸ್ ಸಮಿತಿ ವರದಿಯಲ್ಲಿ ಉಲ್ಲೇಖಿಸಿರುವಂತೆ ದತ್ತಪೀಠವು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿದೆ. ದತ್ತಪೀಠವು ಜಾಗರಾ ಹೋಬಳಿಯ ಸ.ನಂ.157ರಲ್ಲಿದ್ದು, ಬಾಬಾಬುಡಾನ್‍ಗಿರಿಯು ನಾಗೇನಹಳ್ಳಿಯ ಸ.ನಂ.57ರಲ್ಲಿ 2 ಎಕರೆ 38 ಗುಂಟೆ ಜಾಗದಲ್ಲಿದೆ. ಇದು ಕಂದಾಯ ಇಲಾಖೆಯ ಪಹಣಿಗಳಲ್ಲೂ ನಮೂದಾಗಿದೆ. ಹೀಗಿದ್ದರೂ ನ್ಯಾಯಾಲಯದ ತೀರ್ಪನ್ನು ಒಂದು ವರ್ಗದ ಪರವಾಗಿ ನೀಡಲಾಗಿದೆ. ಈ ದ್ವಂಧ್ವದಿಂದ ಕೂಡಿದ ತೀರ್ಪನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ತಿಳಿಸಿರುವ ಸೇನೆಯ ಸದಸ್ಯರು, ದತ್ತಪೀಠದಲ್ಲಿರುವ ಗೋರಿಗಳನ್ನು ಬಾಬಾಬುಡಾನ್‍ಗಿರಿಗೆ ಸ್ಥಳಾಂತರಿಸಬೇಕು. ಪೀಠಕ್ಕೆ ಹಿಂದೂ ಆಡಳಿತಾಧಿಕಾರಿಯನ್ನು ನೇಮಿಸಿ, ಹಿಂದೂ ಅರ್ಚಕರನ್ನೂ ನೇಮಿಸಬೇಕು. ಈ ವಿಚಾರದಲ್ಲಿ ನ್ಯಾಯಾಲಯ ತನ್ನ ತೀರ್ಪನ್ನು ಮರುಪರಿಶೀಲಿಸಿ ದೇಶದ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಗೌರವಿಸಿ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಶ್ರೀರಾಮಸೇನೆ ತನ್ನ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಮಹೇಶ್‍ಕುಮಾರ್, ಜಿಲ್ಲಾಧ್ಯಕ್ಷ ರಂಜಿತ್‍ಶೆಟ್ಟಿ, ಸದಸ್ಯರಾದ ಸಂದೀಪ್, ನಂದನ್, ಪವನ್, ದಿಲೀಪ್‍ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.







