ಪುತ್ತೂರು ಬಿಜೆಪಿ ಅಭ್ಯರ್ಥಿಯಾಗಿ ಸಂಜೀವ ಮಠಂದೂರು ಸ್ಪರ್ಧೆ ಬಹುತೇಕ ಖಚಿತ

ಪುತ್ತೂರು, ಎ. 7: ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಕೊನೆಗೂ ಬಿಜೆಪಿ ಅಭ್ಯರ್ಥಿ ಅಂತಿಮವಾಗಿದ್ದು, ಕಳೆದ ಬಾರಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಶೆಟ್ಟಿ ವಿರುದ್ಧ ಅಲ್ಪ ಮತಕ್ಕೆ ಸೋಲನುಭವಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷರಾಗಿರುವ ಹಿರೇಬಂಡಾಡಿಯ ಸಂಜೀವ ಮಠಂದೂರು ಅವರನ್ನು ಬಿಜೆಪಿ ಹೈಕಮಾಂಡ್ ಅಂತಿಮಗೊಳಿಸಿದೆ ಎಂದು ತಿಳಿದು ಬಂದಿದೆ.
ಬಿಜೆಪಿಯಿಂದ ಉದ್ಯಮಿ ಅಶೋಕ್‌ಕುಮಾರ್ ರೈ ಕೋಡಿಂಬಾಡಿ, ಹಿಂದೂ ಸಂಘಟನೆಗಳ ಮುಖಂಡ ಅರುಣ್‌ಕುಮಾರ್ ಪುತ್ತಿಲ, ಮತ್ತು ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅವರ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತು. ಆದರೆ ಇದೀಗ ಬಿಜೆಪಿ ಹೈಕಮಾಂಡ್ ಸಂಜೀವ ಮಠಂದೂರು ಅವರ ಹೆಸರನ್ನು ಬಹುತೇಕ ಖಚಿತಗೊಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೃಷಿಕರಾದ ಮಠಂದೂರು ಅವರು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ಸಂಬಂಧಿಕರಾಗಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಅಲ್ಪ ಮತದಿಂದ ಸೋಲನುಭವಿಸಿದ್ದರೂ ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಜಿಲ್ಲೆಯಾದ್ಯಂತ ಓಡಾಟ ನಡೆಸಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಅವರು ಪಕ್ಷದ ಜಿಲ್ಲಾಧ್ಯಕ್ಷರಾಗಿರುವ ಕಾರಣ ಪಕ್ಷವು ಇತರರಿಗೆ ಅವಕಾಶ ನೀಡಬಹುದು ಎಂಬ ಮಾತು ಬಹುತೇಕ ಕೇಳಿ ಬಂದಿತ್ತು. ಇದರಿಂದಾಗಿ ಪುತ್ತೂರು ಕ್ಷೇತ್ರದ ಮೇಲೆ ಹಲವಾರು ಮಂದಿ ಆಕಾಂಕ್ಷೆ ಹೊಂದಿದ್ದರು. ಮಠಂದೂರು ಅವರು ಜಿಲ್ಲಾಧ್ಯಕ್ಷರಾಗಿ ನೇಮಕವಾಗಿರುವ ಕಾರಣ ಅವರು ಇನ್ನು ಪುತ್ತೂರು ಕ್ಷೇತ್ರದಿಂದ ಸ್ಪರ್ದಿಸುವ ಅವಕಾಶ ಕಡಿಮೆ ಎಂದೇ ಬಹುತೇಕರು ಹೇಳುತ್ತಿದ್ದರು. ಈ ಕಾರಣಕ್ಕಾಗಿಯೇ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರ ಆಪ್ತರಾಗಿರುವ ಉದ್ಯಮಿ ಕೋಡಿಂಬಾಡಿ ಅಶೋಕ್‌ಕುಮಾರ್ ರೈ ಅವರು ಕಳೆದ ಎರಡು ವರ್ಷಗಳಿಂದ ಹಲವಾರು ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳುವುದರೊಂದಿಗೆ ಗ್ರಾಮೀಣ ಭಾಗದಲ್ಲಿ ಪಕ್ಷವನ್ನು ಗಟ್ಟಿಗೊಳಿಸುತ್ತಾ ಬಂದಿದ್ದರು.
2013ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಶಕುಂತಳಾ ಶೆಟ್ಟಿ ಅವರ ವಿರುದ್ಧ 4289 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಲೆಕ್ಕಾಚಾರ ಮತ್ತು ಬಿಜೆಪಿ ಗುಪ್ತಚರ ವರದಿಯನ್ನು ಆಧರಿಸಿ ಸಂಜೀವ ಮಠಂದೂರು ಅವರ ಆಯ್ಕೆ ನಡೆಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ. ಎಪ್ರಿಲ್ 10ರಂದು ಅಧಿಕೃತ ಘೋಷಣೆ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿದೆ.







