ಬಂಟ್ವಾಳ: ಬೆಳಗ್ಗೆ ಬಿಜೆಪಿ, ಸಂಜೆ ಕಾಂಗ್ರೆಸ್ ಸೇರ್ಪಡೆ
ಹೀಗೊಂದು ವಿನೂತನ ಪಕ್ಷಾಂತರ ನಾಟಕ

ಬಂಟ್ವಾಳ, ಎ. 7: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪ ಹಾಗೂ ಪಕ್ಷಾಂತರ ಸರ್ವೇ ಸಾಮಾನ್ಯ. ಆದರೆ ಬಂಟ್ವಾಳ ವಿಧಾನಸಭಾ ವ್ಯಾಪ್ತಿಯಲ್ಲಿ ವಿನೂತನ ಪಕ್ಷಾಂತರ ನಾಟಕವೊಂದು ಶನಿವಾರ ನಡೆದಿದೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸುಂದರ ದೇವಿನಗರ ಅನಂತಾಡಿ ಎಂಬರು ಇಂದು ಬೆಳಿಗ್ಗೆ ಕಾಂಗ್ರೆಸ್ ತೊರೆದು ತಮ್ಮ ಬೆಂಬಲಿ ಗರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದರು.
ಬಿಜೆಪಿಗೆ: ಬಿ.ಸಿ.ರೋಡಿನ ಪಕ್ಷದ ಕಚೇರಿಯಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಮುಖಂಡ ರಾಜೇಶ್ ನಾಯ್ಕಾ ಉಳಿಪ್ಪಾಡಿಗುತ್ತು ಅವರುರ್ ಸುಂದರ ದೇವಿನಗರ ಅವರನ್ನು ಪಕ್ಷದ ಧ್ವಜನೀಡಿ ಬಿಜೆಪಿಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಜ್ರನಾಥ ಕಲ್ಲಡ್ಕ, ಮುಖಂಡರಾದ ಗಣೇಶ್ ರೈ ಮಾಣಿ, ಸೀತಾರಾಮ ಪೂಜಾರಿ, ರಮಾನಾಥ ರಾಯಿ, ಸಂತೋಷ ಶೆಟ್ಟಿ ರಾಯಿಬೆಟ್ಟು, ಗುರುದತ್ತ್ ಮೊದಲಾದವರು ಉಪಸ್ಥಿತರಿದ್ದರು.
ಮತ್ತೆ ಕಾಂಗ್ರೆಸಿಗೆ: ಪಕ್ಷಾಂತರ ಮನಗಂಡ ಕಾಂಗ್ರೆಸ್ ಮುಖಂಡರು ಸುಂದರ ದೇವಿನಗರ ಅನಂತಾಡಿ ಅವರು ಮನವೊಲಿಸುವ ಮೂಲಕ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಅಬ್ಬಾಸ್ ಅಲಿ, ಚಂದ್ರಪ್ರಕಾಶ್ ಶೆಟ್ಟಿ, ಮಂಜುಳಾ ಮಾದವ ಮಾವೆ, ಜಯಂತಿ ಅನಂತಾಡಿ ಉಪಸ್ಥಿತರಿದ್ದರು.





