ಮುಂದಿನ ಶೈಕ್ಷಣಿಕ ಸಾಲಿನಿಂದ ಕನ್ನಡದಲ್ಲಿ ಪಿಯು ವಿಜ್ಞಾನ ಪಠ್ಯ ಪುಸ್ತಕ

ಬೆಂಗಳೂರು, ಎ.7: ಮುಂದಿನ ಶೈಕ್ಷಣಿಕ ಸಾಲಿನಿಂದ ಪಿಯು ವಿಜ್ಞಾನ ವಿಷಯಗಳ ಪಠ್ಯ ಪುಸ್ತಕಗಳನ್ನು ಆಂಗ್ಲ ಮಾಧ್ಯಮದ ಜತೆಗೆ ಕನ್ನಡ ಮಾಧ್ಯಮದಲ್ಲೂ ಮುದ್ರಿಸಲು ಪಿಯು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಮುಂದಿನ ವರ್ಷದ ಪ್ರಥಮ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಿಜ್ಞಾನದ ವಿಷಯದ ಪುಸ್ತಕಗಳು ಈಗಾಗಲೆ ಮುದ್ರಣ ಹಂತದಲ್ಲಿದೆ. ಆಂಗ್ಲ ಮಾಧ್ಯಮದ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕನ್ನಡ ಮಾಧ್ಯಮದ ವಿಜ್ಞಾನ ಪುಸ್ತಕ ಮುಂದಿನ 15 ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
2013-14ರಿಂದಲೆ ವಿಜ್ಞಾನ ಪಠ್ಯಗಳನ್ನು ಕನ್ನಡ ಮಾಧ್ಯಮದಲ್ಲಿ ಮುದ್ರಿಸುವ ಪ್ರಕ್ರಿಯೆ ಆರಂಭವಾಗಿತ್ತು. ವಿಜ್ಞಾನ ಪುಸ್ತಕಗಳನ್ನು ಕನ್ನಡ ಮಾಧ್ಯಮಕ್ಕೆ ಭಾಷಾಂತರಿಸುವ ಕಾರ್ಯವನ್ನು ರಾಜ್ಯದ ವಿಶ್ವವಿದ್ಯಾಲಯವೊಂದಕ್ಕೆ ನೀಡಲಾಗಿತ್ತು. ತಾಂತ್ರಿಕ ಸಮಸ್ಯೆಯಿಂದಾಗಿ ಭಾಷಾಂತರ ಕಾರ್ಯ ಪೂರ್ಣಗೊಂಡಿರಲಿಲ್ಲ. ಮುಂದಿನ ವರ್ಷದಿಂದ ರಾಜ್ಯದ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿಜ್ಞಾನ ವಿಭಾಗಕ್ಕೆ ಆಕರ್ಷಿಸುವ ದೃಷ್ಟಿಯಿಂದ ವಿಜ್ಞಾನ ವಿಷಯಗಳ ಪಠ್ಯಗಳನ್ನು ಕನ್ನಡ ಮಾಧ್ಯಮದಲ್ಲಿ ಮುದ್ರಿಸಲಾಗಿದೆ. ವಿವಿಧ ಕಾಲೇಜುಗಳಲ್ಲಿರುವ ವಿಜ್ಞಾನ ಪ್ರಾಧ್ಯಾಪಕರ, ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ಉತ್ತಮ ಹಿಡಿತ ಇರುವ ಪ್ರಾಧ್ಯಾಪಕರ ಸಹಕಾರದೊಂದಿಗೆ ಭಾಷಾಂತರ ಕಾರ್ಯ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.







