ಬೆಂಗಳೂರು: ಎ.8 ರಂದು ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಸಮಾರೋಪ

ಬೆಂಗಳೂರು, ಎ. 7: ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಸಮಾರೋಪ ಸಮಾರಂಭ ಎ.8 ರಂದು ರಾಜಧಾನಿ ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ.
ಮಧ್ಯಾಹ್ನ 3ಗಂಟೆಯ ಸುಮಾರಿಗೆ ಆರಂಭವಾಗಲಿರುವ ಸಮಾರೋಪ ಸಮಾರಂಭಕ್ಕೆ ನಾಲ್ಕೈದು ಲಕ್ಷಕ್ಕೂ ಅಧಿಕ ಮಂದಿ ಪಕ್ಷದ ಕಾರ್ಯಕರ್ತರನ್ನು ಸೇರಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಪಕ್ಷ ಸಜ್ಜಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಸಮಾವೇಶಕ್ಕೆ ನಗರದ ವಿವಿಧ ಸ್ಥಳಗಳಿಂದ ಕಾರ್ಯಕರ್ತರನ್ನು ಕರೆತರಲು 3 ಸಾವಿರಕ್ಕೂ ಹೆಚ್ಚು ಕೆಎಸ್ಸಾರ್ಟಿಸಿ, ಬಿಎಂಟಿಸಿ ಹಾಗೂ ಖಾಸಗಿ ಬಸ್‌ಗಳನ್ನು ಈಗಾಗಲೇ ಬುಕ್ ಮಾಡಲಾಗಿದೆ. ಎ.8ರ ಬೆಳಗ್ಗೆ 10ಕ್ಕೆ ರಾಹುಲ್ ಗಾಂಧಿ ಸಫಾಯಿ ಕರ್ಮಚಾರಿಗಳೊಂದಿಗೆ ಸಭೆ ನಡೆಸಲಿದ್ದು, ಮಧ್ಯಾಹ್ನ 12ಕ್ಕೆ ಉದ್ಯಮಿಗಳೊಂದಿಗೆ ಜ್ಞಾನಭಾರತಿ ಆಡಿಟೋರಿಯಂನಲ್ಲಿ ಸಂವಾದ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ನಿಟ್ಟಿನಲ್ಲಿ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ವಿಪಕ್ಷಗಳಿಗೆ ಸಡ್ಡು ಹೊಡೆಯಲು ಸನ್ನದ್ಧವಾಗಿದೆ.







