ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುವವರ ವಿರುದ್ಧ ಪ್ರತಿಭಟನೆ: ಜೆಡಿಎಸ್ ರಾಜ್ಯ ಉಪಾಧ್ಯಕ್ಷ ದೇವರಾಜ್
ಬಾಬಾಬುಡನ್‍ಗಿರಿ-ದತ್ತಪೀಠ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು

ಚಿಕ್ಕಮಗಳೂರು, ಎ.7: ಬಾಬಾಬುಡನ್‍ಗಿರಿ-ದತ್ತಪೀಠ ವಿಚಾರ ಸಂಬಂಧ ಸುಪ್ರೀಂ ಕೋರ್ಟ್ ನಾಗಮೋಹನ್‍ದಾಸ್ ಸಮಿತಿ ನೀಡಿರುವ ವರದಿಯನ್ನು ಅಂಗೀಕರಿಸಿದೆ. ಸಮಿತಿಯು ನೀಡಿರುವ ವರದಿ ಆಧರಿಸಿ ದತ್ತಪೀಠವು ಮುಜರಾಯಿ ಇಲಾಖೆಯಡಿಯೇ ಇರಬೇಕು. ಗುಹೆಯಲ್ಲಿ ಮುಜಾವರ್ ನೇತೃತ್ವದಲ್ಲಿಯೇ ಧಾರ್ಮಿಕ ವಿಧಿಗಳು ನಡೆಯಬೇಕೆಂದು ನ್ಯಾಯಾಧಿಶರು ತೀರ್ಪು ನೀಡಿದೆ. ನ್ಯಾಯಾಲಯದ ಈ ತೀರ್ಪನ್ನು ಎಲ್ಲರೂ ಗೌರವಿಸಬೇಕು. ಇದನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುವ ಯಾವುದೇ ಪಕ್ಷ, ಸಂಘಟನೆ ವಿರುದ್ಧ ಜೆಡಿಎಸ್ ಉಗ್ರ ಹೋರಾಟಕ್ಕಿಳಿಯಲಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಬಾಬುಡನ್‍ಗಿರಿ-ದತ್ತಪೀಠ ವಿಚಾರ ಸಂಬಂಧ 1975-78ರವರೆಗೆ ಜಿಲ್ಲಾ ನ್ಯಾಯಾಲದಲ್ಲಿ ನಡೆದ ವಿಚಾರಣೆ ವೇಳೆಯೂ ಜಿಲ್ಲಾ ನ್ಯಾಯಾಲಯ ಇದೇ ರೀತಿಯ ತೀರ್ಪು ನೀಡಿದೆ. ಸ್ಥಳ ಯಾವುದೇ ಒಂದು ಧರ್ಮಕ್ಕೆ ಸೀಮಿತವಾದುದಲ್ಲ ಎಂದು ಹೈಕೋರ್ಟ್ ಕೂಡ ಈ ಹಿಂದೆ ತೀರ್ಪು ನೀಡಿತ್ತು. ಹೈಕೋರ್ಟಿನ ತೀರ್ಪನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಆದರೆ ಈ ತೀರ್ಪಿನ ವಿರುದ್ಧ ವಿಎಚ್‍ಪಿ ಮುಖಂಡ ವಿಠಲ್‍ರಾವ್ ಹೂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಮನವಿ ಪರಿಶೀಲಿಸಿದ ನ್ಯಾಯಾಲಯ ಅದನ್ನು ತಿರಸ್ಕರಿಸಿ, ಈ ಸಂಬಂಧ ವಿಸ್ತೃತ ವರದಿ ನೀಡಲು ಮುಜರಾಯಿ ಇಲಾಖೆ ಆಯುಕ್ತರಿಗೆ ಆದೇಶಿಸಿತ್ತು. ಆಗ ವಿಎಚ್‍ಪಿಯಾಗಲೀ, ಬಜರಂಗದಳವಾಗಲೀ ಈ ಸಂಬಂಧ ಮೇಲ್ಮನವಿ ಸಲ್ಲಿಸದೇ ಮೌನವಹಿಸಿದ್ದರು ಎಂದರು.
ಸದ್ಯ ನಾಗಮೋಹನ್‍ದಾಸ್ ವರದಿ ಆಧರಿಸಿ ಪೂಜಾ ಕೈಂಕರ್ಯಗಳನ್ನು ಮುಜಾವರ್ ನೇತೃತ್ವದಲ್ಲಿ ನಡೆಸಲು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಈ ತೀರ್ಪು ಬಾಬಾಬುಡನ್‍ಗಿರಿ-ದತ್ತಪೀಠದ ಭೂ ವಿವಾದಕ್ಕೆ ಅನ್ವಯಿಸುವುದಿಲ್ಲ. ಆದ್ದರಿಂದ ಎಲ್ಲ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಈ ತೀರ್ಪು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಮುಂದಾಗಬಾರದು ಎಂದ ಅವರು, ಜಿಲ್ಲೆಯ ಹಿಂದೂ-ಮುಸ್ಲಿಮರು ಸೌಹಾರ್ದ ಬಯಸುತ್ತಿದ್ದಾರೆ. ಪ್ರಸಕ್ತ ನ್ಯಾಯಾಲಯದ ತೀರ್ಪು ಮುಂದಿಟ್ಟುಕೊಂಡು ಬಾಬಾಬುಡನ್‍ಗಿರಿ-ದತ್ತಪೀಠದ ಸಾಮರಸ್ಯಕ್ಕೆ ಧಕ್ಕೆ ಬಾರದಂತೆ ಎಲ್ಲ ರಾಜಕೀಯ ಪಕ್ಷಗಳು ಈ ತೀರ್ಪನ್ನು ಗೌರವಿಸಬೇಕೆಂದು ಅವರು ಮನವಿ ಮಾಡಿದರು.
ಜೆಡಿಎಸ್ ಪಕ್ಷ ಜಿಲ್ಲೆಯ ಜನರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತದೆ. ಈ ಸಂಬಂಧ ಮುಂದೆ ರಾಜ್ಯದಲ್ಲಿ ಜೆಡಿಎಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಲ್ಲಿ ಬಾಬಾಬುಡನ್‍ಗಿರಿ-ದತ್ತಪೀಠ ವಿಚಾರ ಸಂಬಂಧ ಇರುವ ಸಮಸ್ಯೆಗಳನ್ನು ಅಧಿಕಾಕ್ಕೇರಿದ ಮೂರೇ ತಿಂಗಳಲ್ಲಿ ಬಗೆಹರಿಸುವುದಾಗಿ ಪಕ್ಷದ ವರಿಷ್ಠರು ತಿಳಿಸಿದ್ದಾರೆ. ಸದ್ಯ ನ್ಯಾಯಾಲಯ ನೀಡಿದ ತೀರ್ಪನ್ನು ಪಕ್ಷ ಗೌರವಿಸುತ್ತದೆ ಎಂದ ಅವರು, ಈ ವಿಚಾರದಲ್ಲಿ ಬಿಜೆಪಿ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸಕ್ಕೆ ಕೈ ಹಾಕಬಾರದು. ಈ ಸಂಬಂಧ ಯಾವುದೇ ಪಕ್ಷ ರಾಜಕೀಯ ಮಾಡಲು ಮುಂದಾದಲ್ಲಿ ಅದರ ವಿರುದ್ಧ ಪಕ್ಷ ಉಗ್ರ ಹೋರಾಟ ರೂಪಿಸಲಿದೆ. ತೀರ್ಪಿನ ವಿರುದ್ದ ಮಾತನಾಡುವವರು, ವಿರೋಧಿಸುವವರು ಈ ದೇಶದಲ್ಲಿರಲು ಅನರ್ಹರು ಎಂದು ಅಭಿಪ್ರಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಮುಖಂಡರಾದ ಚಂದ್ರಪ್ಪ, ರಮೇಶ್, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.
ಸಿ.ಟಿ.ರವಿ ನಂಬಿಕೆಗೆ ಅನರ್ಹ: ಬಾಬಾಬುಡನ್‍ಗಿರಿ-ದತ್ತಪೀಠ ವಿಚಾರ ಸಂಬಂಧ ಶುಕ್ರವಾರ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಸಿ.ಟಿ.ರವಿ ಅವರು ಈ ವಿಚಾರವನ್ನು ಜನತಾ ನ್ಯಾಯಾಲಯಕ್ಕೆ ಕೊಂಡೊಯ್ಯುವುದಾಗಿ ಹೇಳಿಕೆ ನೀಡಿದ್ದಾರೆ. ಅವರ ಮಾತಿನಲ್ಲಿ ಜನರಿಗೆ ನಂಬಿಕೆ ಇಲ್ಲ. ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕವಾಗಬೇಕು, ಬಾಬಾಬುಡನ್‍ಗಿರಿ-ದತ್ತಪೀಠ ಹಿಂದೂಗಳಿಗೆ ಸೇರಬೇಕೆಂದು ಸಿ.ಟಿ.ರವಿ ಹಿಂದಿನಿಂದಲೂ ಹೇಳುತ್ತಿದ್ದಾರೆ. ಆದರೆ ಅವರು ಸತತ ಎರಡು ಬಾರಿ ಶಾಸಕರಾಗಿದ್ದಾಗ ಈ ಬಗ್ಗೆ ಚಕಾರ ಎತ್ತಿರಲಿಲ್ಲ. ಅವರದೇ ಸರಕಾರ ಅಧಿಕಾರದಲ್ಲಿದ್ದಾಗ ಮಂತ್ರಿಯಾಗಿದ್ದಾಗಲೂ ಅವರು ಈ ಬಗ್ಗೆ ಮಾತನಾಡದೇ ಕಾಲಹರಣ ಮಾಡಿದ್ದರು. ಆದರೆ ಸದ್ಯ ನ್ಯಾಯಾಲಯದ ತೀರ್ಪು ಬಂದಾಗ ಅದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಶಾಸಕರಾದಿಯಾಗಿ ಬಿಜೆಪಿಯವರು ಚುನಾವಣೆ ಸಂದರ್ಭದಲ್ಲಿ ತೀರ್ಪಿನ ವಿರುದ್ಧ ಕ್ಷುಲ್ಲಕ ರಾಜಕಾರಣ ಮಾಡಬಾರದು. ಅಗತ್ಯವಿದ್ದಲ್ಲಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಿ.
- ಎಚ್.ಎಚ್.ದೇವರಾಜ್.







