ಸ್ವಸಾಮರ್ಥ್ಯವನ್ನು ಗೌರವಿಸಿ ಜೀವನವನ್ನು ಆಸ್ವಾದಿಸಿ: ರಾಜ್ ಬಿ.ಶೆಟ್ಟಿ
ಆಳ್ವಾಸ್‌ನಲ್ಲಿ ಸಾಂಪ್ರದಾಯಿಕ ದಿನಾಚರಣೆ

ಮೂಡುಬಿದಿರೆ, ಎ.7: ಕೀಳರಿಮೆಯಿಂದ ಪ್ರತಿಯೊಬ್ಬರೂ ಹೊರಬರಬೇಕು. ತಮ್ಮ ಸಾಮರ್ಥ್ಯದ ಬಗ್ಗೆ ಗೌರವ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಆಗ ಜಗತ್ತನ್ನೇ ಗೆಲ್ಲುವ ಆತ್ಮವಿಶ್ವಾಸ ನಮ್ಮದಾಗುತ್ತದೆ. ಹೀಗೆ ಜೀವನದ ಪ್ರತೀ ನಿಮಿಷವನ್ನೂ ಆಸ್ವಾದಿಸಬೇಕು ಎಂದು ಒಂದು ಮೊಟ್ಟೆಯ ಕತೆ ಸಿನಿಮಾ ನಿರ್ದೇಶಕ ರಾಜ್ ಬಿ.ಶೆಟ್ಟಿ ಹೇಳಿದರು.
ಅವರು ಶನಿವಾರ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಪ್ರವರ್ತಿತ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ‘ ಆಳ್ವಾಸ್ ಟ್ರೆಡಿಶನಲ್ ಡೇ-2018’ ಡೊಲು ಬಡಿಯುವ ಮೂಲಕ ವಿಶಿಷ್ಠವಾಗಿ ಉದ್ಘಾಟಿಸಿ ಮಾತನಾಡಿದರು.
ಸೃಜನಶೀಲತೆ ಪ್ರತಿಯೊಬ್ಬರಲ್ಲಿದೆ. ಎಲ್ಲರಲ್ಲಿರುವ ವಿಶಿಷ್ಠತೆಯನ್ನು ಗುರುತಿಸುವ ಮೂಲಕ ಜೀವನದ ಸಂತಸವನ್ನು ಆನಂದಿಸಬೇಕು ಎಂದವರು ಹೇಳಿದರು. ಸಮಾರಂಭದ ಅಧ್ಯಕ್ಷತೆವಹಿಸಿದ್ದ ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿ ಆಳ್ವಾಸ್‌ನಲ್ಲಿ ಶಿಕ್ಷಣ ದೊಂದಿಗೆ ಸಂಸ್ಕೃತಿಯ ಒಳನೋಟವನ್ನು ಹೊಂದುವ, ಅರಿಯುವ ಹಾಗೂ ಅದನ್ನು ಪ್ರೀತಿಸುವ, ಗೌರವಿಸುವಂಥ ವಾತಾವರಣವನ್ನು ಕಲ್ಪಿಸಲಾಗುತ್ತಿದೆ. ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವಂತೆಯೇ ಇತರರ ಸಂಸ್ಕೃತಿಯನ್ನು ಗೌರವಿಸುವ, ವ್ಯತ್ಯಾಸವನ್ನು ತಿಳಿದು ಗೌರವಿಸುವಂಥ ಗುಣ ನಮ್ಮದಾಗ ಬೇಕು. ನೀವೆಲ್ಲ ವಿಶಿಷ್ಟವಾಗಿ ಬೆಳೆಯಬೇಕಾಗಿದೆ. ಈ ಉದ್ದೇಶಕ್ಕಾಗಿ ಆಳ್ವಾಸ್‌ನಲ್ಲಿ ಎಲ್ಲ ಬಗೆಯ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿರುವುದು ಈ ಸಂಸ್ಥೆಯ ಅವಿಭಾಜ್ಯ ಅಂಗವೇ ಆಗಿದೆ’ ಎಂದು ಅವರು ಹೇಳಿದರು.
ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಡಾ ಪೀಟರ್ ಫೆರ್ನಾಂಡಿಸ್, ಡಾ. ವಿನಯಚಂದ್ರ ಶೆಟ್ಟಿ, ಡಾ ಕುರಿಯನ್, ಡಾ. ಓಲಿವರ್ ಜೋಸೆಫ್, ಡಾ ವನಿತಾ ಶೆಟ್ಟಿ, ಆದರ್ಶ್ ಹೆಗ್ಡೆ, ಡಾ. ವರ್ಣನ್ ಡಿ’ಸಿಲ್ವ, ಶೈಲಾ ಉಪಸ್ಥಿತರಿದ್ದರು., ದ. ಭಾರತ, ಕೇಂದ್ರೀಯ ಮತ್ತು ಉತ್ತರ ಭಾರತ, ಈಶಾನ್ಯ ಭಾರತ, ಕರಾವಳಿ ಕರ್ನಾಟಕ, ಕರಾವಳಿ ಹೊರತಾದ ಕರ್ನಾಟಕ, ಕೇರಳ, ಅಂತಾರಾಷ್ಟ್ರೀಯ (ಭೂತಾನ್, ಶ್ರೀಲಂಕಾ, ನೇಪಾಳ) ಎಂಬ ವಿಭಾಗಗಳಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು, ಆಹಾರ ವೈವಿಧ್ಯಸಹಿತ ವಿವಿಧ ಪ್ರದರ್ಶನಾಂಗಣಗಳನ್ನು ರೂಪಿಸಲಾಗಿತ್ತು. ಪಿಯುಸಿ, ಪ್ರೌಢಶಾಲೆ ಹೊರತು ಪಡಿಸಿ ಇತರೆಲ್ಲ ಕಾಲೇಜುಗಳ ಸುಮಾರು 10,000 ವಿದ್ಯಾರ್ಥಿಗಳು ಸ್ಪರ್ಧಾಕಣದಲ್ಲಿದ್ದರು. ಆರಂಭದಲ್ಲಿ ಆಕರ್ಷಕ ಮೆರವಣಿಗೆ ನಡೆಯಿತು. ಡಾ ಬಿ.ಎ. ಯತಿಕುಮಾರ ಸ್ವಾಮಿ ಗೌಡ ವಂದಿಸಿದರು. ಅಶ್ವಿನಿ ಶೆಟ್ಟಿ ನಿರೂಪಿಸಿದರು.







