ಮೈಸೂರು: ಎಸ್ಸಿ-ಎಸ್ಟಿ ದೌರ್ಜನ್ಯ ತೀರ್ಪು ಖಂಡಿಸಿ ದಸಂಸ, ಮೈಸೂರು ವಿ.ವಿ ಸಂಶೋಧಕರ ಸಂಘ ಪ್ರತಿಭಟನೆ

ಮೈಸೂರು,ಎ.7: ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ ತೀರ್ಪು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಪ.ಜಾತಿ/ಪ.ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಯಾವುದೇ ಸರ್ಕಾರಿ ನೌಕರರು ಅಥವಾ ವ್ಯಕ್ತಿಗಳ ಮೇಲೆ ಕೇಸು ದಾಖಲಾದರೆ ತಕ್ಷಣ ಅವರನ್ನು ಬಂಧಿಸದಂತೆ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿರುವುದು ಅಟ್ರಾಸಿಟಿ ಕಾಯ್ದೆ ದುರುಪಯೋಗ ಹೆಚ್ಚಾಗುತ್ತಿದೆ ಎನ್ನುವುದಕ್ಕೆ ಉದಾಹರಣೆಯಾಗಿದ್ದು, ಇದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಖಂಡಿಸುತ್ತದೆ ಎಂದು ಹೇಳಿದರು.
ಈ ತೀರ್ಪನ್ನು ನೀಡಿದ ನ್ಯಾಯಾಧೀಶರು ದಲಿತರ ನೋವುಗಳನ್ನು ಅಂತಃಕರಣದಿಂದ ನೋಡುವ ಅಗತ್ಯವಿದೆ. ಯಾವುದೋ ಒಂದು ಸುಳ್ಳು ಪ್ರಕರಣವನ್ನು ಮುಂದಿಟ್ಟುಕೊಂಡು ಅನ್ಯಾಯ ಮಾಡುವುದನ್ನು ಖಂಡಿಸುತ್ತೇವೆ ಎಂದರು. ಕಾಯ್ದೆಯನ್ನು ದುರ್ಬಲಗೊಳಿಸುವ ತೀರ್ಪನ್ನು ತಡೆಹಿಡಿದು ಕೇಂದ್ರ ಸರ್ಕಾರ ಸರ್ವೋಚ್ಛ ನ್ಯಾಯಾಲಯದಲ್ಲಿ ಪುನರ್ ಪರಿಶೀಲನಾ ಅರ್ಜಿ ಹಾಕಿ ಈ ಕಾಯ್ದೆಯನ್ನು ಬಲಿಷ್ಠಗೊಳಿಸುವಂತೆ ಒತ್ತಾಯಿಸಿದರು.
ಮತ್ತೊಂದೆಡೆ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
ಮಾನಸಗಂಗೋತ್ರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಸುಪ್ರೀಂಕೋರ್ಟಿನ ತೀರ್ಪಿನಿಂದ ಶೋಷಿತ ಸಮುದಾಯಗಳಲ್ಲಿ ಅಭದ್ರತೆ ಮನೆ ಮಾಡಿದೆ. ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ತುಟಿಬಿಚ್ಚದ ಪ್ರಧಾನಿಯವರು ಮೌನಮುರಿಯಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಸಂಸ ನಿಂಗರಾಜ್ ಮಲ್ಲಾಡಿ, ಹೆಚ್.ಪಿ.ದಿವಾಕರ್, ಕಾರ್ಯ ಬಸವಣ್ಣ, ದೊಡ್ಡಸಿದ್ದು ಹಾದನೂರು, ಕೆ.ನಂಜಪ್ಪ , ವಿಶ್ವವಿದ್ಯಾನಿಲಯ ಸಂಶೋಧಕರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷ ಪ್ರಕಾಶ್, ಮಹೇಶ್ ಸೋಸ್ಲೆ, ಕಿರಣ್, ಮಹದೇವಮೂರ್ತಿ, ಬಸವಣ್ಣ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.







