ಮತದಾರರ ನಿವಾಸಕ್ಕೆ ಮತದಾನದ ಚೀಟಿ ವಿತರಣೆ: ಆಮಿಷಗಳ ಕಡಿವಾಣಕ್ಕೆ ಚುನಾವಣಾಧಿಕಾರಿಗಳ ಕ್ರಮ
ಬೆಂಗಳೂರು, ಎ.7: ಚುನಾವಣಾ ಆಮಿಷಗಳಿಂದ ಮತದಾರರನ್ನು ತಡೆಯುವ ನಿಟ್ಟಿನಲ್ಲಿ ಮತಗಟ್ಟೆಯ ಅಧಿಕಾರಿಗಳೆ ಮತದಾರರ ಮನೆ ಬಾಗಿಲಿಗೆ ಮತದಾನದ ಚೀಟಿಗಳನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ.
ಮತದಾನಕ್ಕೆ ಏಳು ದಿನ ಇರುವಾಗ ಮತಗಟ್ಟೆ ಅಧಿಕಾರಿಗಳು ತನ್ನ ವ್ಯಾಪ್ತಿಗೆ ಬರುವ ಎಲ್ಲ ಮತದಾರರ ಮನೆಗೆ ಮತದಾನದ ಚೀಟಿ ತಲುಪಿಸುತ್ತಾರೆ. ಆ ಕ್ಷೇತ್ರದ ಮತದಾರರ ಪಟ್ಟಿ ಯಾವ ಭಾಷೆಯಲ್ಲಿ ಪ್ರಕಟವಾಗಿರುತ್ತದೆಯೊ ಅದೇ ಭಾಷೆಯಲ್ಲಿ ಮತದಾನದ ಚೀಟಿ ಮುದ್ರಿಸಲಾಗಿರುತ್ತದೆ.
ಮತಗಟ್ಟೆ ಅಧಿಕಾರಿಗಳು ಮತದಾನದ ಚೀಟಿ ವಿತರಿಸಿದ ಬಳಿಕ, ಆ ಮತದಾರರಿಂದ ಹಸ್ತಾಕ್ಷರ ಅಥವಾ ಹೆಬ್ಬೆಟ್ಟು ಗುರುತು ಪಡೆದುಕೊಳ್ಳುತ್ತಾರೆ. ಒಬ್ಬರ ಮತದಾನದ ಚೀಟಿಯನ್ನು ಮತ್ತೊಬ್ಬರಿಗೆ ಕೊಡುವಂತಿಲ್ಲ. ಒಂದು ವೇಳೆ ಸಂಬಂಧಿಸಿದ ಮತದಾರ ಸಿಗದೆ ಇದ್ದಾಗ ಆ ಮತದಾನದ ಚೀಟಿಯನ್ನು ಚುನಾವಣಾಧಿಕಾರಿಗಳಿಗೆ ಒಪ್ಪಿಸಲಾಗುತ್ತದೆ. ಹೀಗಾಗಿ ಮತದಾರರು ಮತದಾನದ ಚೀಟಿಯನ್ನು ಪಡೆಯಲು ವಿವಿಧ ಪಕ್ಷಗಳ ಏಜೆಂಟ್‌ರನ್ನು ಅವಲಂಬಿಸಬೇಕಾಗಿಲ್ಲವೆಂದು ಚುನಾವಣಾ ಆಯೋಗ ಪ್ರಕಟನೆಯಲ್ಲಿ ತಿಳಿಸಿದೆ.
Next Story





