ರಶ್ಯ ವಿರುದ್ಧ ಅಮೆರಿಕ ಹೊಸ ದಿಗ್ಬಂಧನ

ವಾಶಿಂಗ್ಟನ್, ಎ. 7: ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಶುಕ್ರವಾರ ರಶ್ಯದ 7 ಅತಿ ಶ್ರೀಮಂತ ರಾಜಕಾರಣಿಗಳು, ಅವರ ಒಡೆತನದ ಅಥವಾ ನಿಯಂತ್ರಣದ 12 ಕಂಪೆನಿಗಳು ಮತ್ತು 17 ಉನ್ನತ ಸರಕಾರಿ ಅಧಿಕಾರಿಗಳ ವಿರುದ್ಧ ಹೊಸದಾಗಿ ದಿಗ್ಬಂಧನಗಳನ್ನು ವಿಧಿಸಿದೆ.
ಪಶ್ಚಿಮದ ಪ್ರಜಾಸತ್ತಾತ್ಮಕ ದೇಶಗಳನ್ನು ದುರ್ಬಲಗೊಳಿಸಲು ರಶ್ಯ ನಡೆಸುತ್ತಿರುವ ಪ್ರಯತ್ನಗಳು ಹಾಗೂ ಸಿರಿಯ ಸರಕಾರ ಮತ್ತು ಯುಕ್ರೇನ್ ಪ್ರತ್ಯೇಕತಾವಾದಿಗಳಿಗೆ ಅದು ನೀಡುತ್ತಿರುವ ಬೆಂಬಲವನ್ನು ವಿರೋಧಿಸಿ ದಿಗ್ಬಂಧನಗಳನ್ನು ಹೇರಲಾಗಿದೆ.
ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಅಳಿಯ ಕಿರಿಲ್ ಶಮಲೊವ್ ಮತ್ತು ಟ್ರಂಪ್ ಚುನಾವಣಾ ಪ್ರಚಾರದ ಮಾಜಿ ಮುಖ್ಯಸ್ಥ ಪೌಲ್ ಮನಫೋರ್ಟ್‌ರ ವ್ಯಾಪಾರ ಪಾಲುದಾರ ಒಲೆಗ್ ಡೆರಿಪಸ್ಕ ದಿಗ್ಬಂಧನಕ್ಕೊಳಗಾದ ರಾಜಕಾರಣಿಗಳ ಪಟ್ಟಿಯಲ್ಲಿದ್ದಾರೆ.
‘‘ಗೊಂದಲ, ಬಿಕ್ಕಟ್ಟು ಮತ್ತು ದ್ವೇಷವನ್ನು ಹರಡುವವರು ತಮ್ಮ ಕಾರ್ಯದಲ್ಲಿ ಯಶಸ್ವಿಯಾಗಲು ಬಿಡಬಾರದು’’ ಎಂದು ಹೇಳಿಕೆಯೊಂದರಲ್ಲಿ ಟ್ರಂಪ್ ಹೇಳಿದ್ದಾರೆ.
Next Story





