2019ರ ವಿಶ್ವಕಪ್ ಗೆದ್ದರೆ ಲಂಡನ್‌ನಲ್ಲಿ ಹೀಗೆ ಸಂಭ್ರಮಾಚರಿಸಲಿದ್ದಾರೆ ವಿರಾಟ್

ಕೋಲ್ಕತಾ, ಎ.7: ಲಾರ್ಡ್ಸ್ ಮೈದಾನದಲ್ಲಿ ಭಾರತ ನಾಟ್‌ವೆಸ್ಟ್ ಏಕದಿನ ಸರಣಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿದ್ದಾಗ ಸೌರವ್ ಗಂಗುಲಿ ಶರ್ಟ್ ತೆಗೆದು ಸಂಭ್ರಮಿಸಿದ ಕ್ಷಣ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಆ ಘಟನೆ ನಡೆದು 15 ವರ್ಷ ಕಳೆದಿದ್ದರೂ ಆ ಕುರಿತು ಈಗಲೂ ಜನರು ಮಾತನಾಡುತ್ತಾರೆ.
ಗಂಗುಲಿಯವರು ಅವರು ಇತ್ತೀಚೆಗೆ ‘ಇಂಡಿಯಾ ಟುಡೆ’ಗೆ ನೀಡಿದ ಸಂದರ್ಶನದಲ್ಲಿ ‘‘ಲಾರ್ಡ್ಸ್ ಮೈದಾನದಲ್ಲಿ ಶರ್ಟ್ ಬಿಚ್ಚಿ ಸಂಭ್ರಮಿಸುವ ಕ್ಷಣವನ್ನು ವಿರಾಟ್ ಕೊಹ್ಲಿ ಪುನರಾವರ್ತಿಸಬಹುದು. 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಒಂದು ವೇಳೆ ಭಾರತ ವಿಶ್ವಕಪ್‌ನ್ನು ಜಯಿಸಿದರೆ ವಿರಾಟ್ ಕೊಹ್ಲಿ ಆಕ್ಸ್‌ಫರ್ಡ್ ರಸ್ತೆಯಲ್ಲಿ ಶರ್ಟ್ ಬಿಚ್ಚಿಕೊಂಡು ಓಡಬಹುದು’’ ಎಂದರು.

ಇಂದು ಬೋರಿಯಾ ಮುಜುಂದಾರ್ ಬರೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಗಂಗುಲಿ ಅವರು ಕೊಹ್ಲಿ ಸಮ್ಮುಖದಲ್ಲೇ, 2019ರಲ್ಲಿ ಭಾರತ ವಿಶ್ವಕಪ್‌ನ್ನು ಜಯಿಸಿದರೆ ಕೊಹ್ಲಿ ಆಕ್ಸ್‌ಫರ್ಡ್ ಸ್ಟ್ರೀಟ್‌ನಲ್ಲಿ ಶರ್ಟ್ ತೆಗೆದು ಓಡುತ್ತಾರೆ...ಇದನ್ನು ಸೆರೆ ಹಿಡಿಯಲು ಕ್ಯಾಮರಾಗಳು ರೆಡಿಯಾಗಿರಬೇಕು. ಕೊಹ್ಲಿಗೆ ಸಿಕ್ಸ್‌ಪ್ಯಾಕ್‌ಯಿದೆ. ಹಾಗಾಗಿ ಅವರು ಶರ್ಟ್ ತೆಗೆದರೆ ನನಗೆ ಅಚ್ಚರಿ ಎನಿಸದು’’ ಎಂದು ಹೇಳಿದರು.
ಗಂಗುಲಿ ಮಾತಿಗೆ ಪ್ರತಿಕ್ರಿಯೆ ನೀಡಿದ ಕೊಹ್ಲಿ, ‘‘ನಾನೊಬ್ಬನೇ ಶರ್ಟ್ ತೆಗೆದು ಸಂಭ್ರಮಿಸಲಾರೆ. ನನ್ನ ಜೊತೆ ಹಾರ್ದಿಕ್ ಪಾಂಡ್ಯ ಹಾಗೂ ಜಸ್‌ಪ್ರಿತ್ ಬುಮ್ರಾ ಕೂಡ ಇರುತ್ತಾರೆ. ಬುಮ್ರಾ ನಮ್ಮೊಂದಿಗೆ ಇರುತ್ತಾರೆ.ಏಕೆಂದರೆ ಅವರಿಗೆ ಸಿಕ್ಸ್ ಪ್ಯಾಕ್‌ಯಿದೆ’’ ಎಂದರು.
2002ರ ಜು.13 ರಂದು ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾರತ ತಂಡ ಇಂಗ್ಲೆಂಡ್ ನೀಡಿದ್ದ 325 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. ಭಾರತದ ಈ ಸಾಧನೆ ಕಂಡು ಕೋಟ್ಯಂತರ ಭಾರತೀಯ ಅಭಿಮಾನಿಗಳು ಸಂಭ್ರಮಾಚರಿಸಿದ್ದರು.
‘‘ನನಗೆ ಆ ರಾತ್ರಿ ಸ್ಪಷ್ಟವಾಗಿ ನೆನಪಿದೆ. ಆ ಪಂದ್ಯದಲ್ಲಿ ಭಾರತ ಉತ್ತಮ ಆರಂಭ ಪಡೆದಿತ್ತು. ಅಷ್ಟೊಂದು ರನ್ ಚೇಸಿಂಗ್ ಮಾಡುವುದು ತುಂಬಾ ಕಷ್ಟಕರ. ಭಾರತದ 5 ವಿಕೆಟ್ ಉರುಳಿದಾಗ ನಾನು ನಿದ್ದೆಗೆ ಜಾರಿದೆ. ಪಂದ್ಯ ಮುಗಿದ ಬಳಿಕ ನನ್ನ ಅಣ್ಣ ನನ್ನನ್ನು ಎಬ್ಬಿಸಿ ಭಾರತ ಪಂದ್ಯ ಜಯಿಸಿದೆ ಎಂದರು. ಅಣ್ಣನ ಮಾತು ನನಗೆ ನಂಬಲು ಸಾಧ್ಯವಾಗಿಲ್ಲ ಎಂದು ಕೊಹ್ಲಿ ಹಳೆಯ ನೆನಪನ್ನು ಬಿಚ್ಚಿಟ್ಟರು. ಭಾರತ 2002ರಲ್ಲಿ ಐತಿಹಾಸಿಕ ಪಂದ್ಯ ಗೆದ್ದಾಗ ಕೊಹ್ಲಿಗೆ 13 ವರ್ಷವಾಗಿತ್ತು.
ಯುವರಾಜ್ ಸಿಂಗ್(87) ಹಾಗೂ ಮುಹಮ್ಮದ್ ಕೈಫ್ 6ನೇ ವಿಕೆಟ್‌ಗೆ 121 ರನ್ ಸೇರಿಸಿ ತಂಡಕ್ಕೆ ಅಸಾಮಾನ್ಯ ಗೆಲುವು ತಂದಿದ್ದರು.







