ಪ್ರಾದೇಶಿಕ ಪಕ್ಷಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಿ : ಮಧು ಬಂಗಾರಪ್ಪ

ತುಮಕೂರು,ಎ.8:ದೇಶವನ್ನಾಳಿದ ರಾಷ್ಟ್ರೀಯ ಪಕ್ಷಗಳು ನೀತಿಗೆಟ್ಟ ರಾಜಕಾರಣ ಬಿಡಬೇಕು. ಪ್ರಾದೇಶಿಕ ಪಕ್ಷಗಳ ಬಗ್ಗೆ ಹಗುರುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಜೆಡಿಎಸ್ ರಾಜ್ಯ ಯುವಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಕಾಂಗ್ರೆಸ್-ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಯಲ್ಲಿ ರಾಷ್ಟ್ರೀಯ ನಾಯಕರು ಮಾತನಾಡುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಆದರೆ ಜೆಡಿಎಸ್ ಪಕ್ಷವನ್ನು ಜೋಕರ್ ಪಕ್ಷ ರೀತಿಯಲ್ಲಿ ನೋಡುವ ಮತ್ತು ಬಿಂಬಿಸುವ ಕೆಲಸವನ್ನು ಬಿಜೆಪಿ-ಕಾಂಗ್ರೆಸ್ ನಿಲ್ಲಿಸಬೇಕು. ನಮ್ಮ ಪಕ್ಷದ ಬಗ್ಗೆ ಮಾತನಾಡಲು ರಾಹುಲ್ ಗಾಂಧಿ ಏನು ವಕ್ತಾರರೇ, ಚೆನ್ನಮ್ಮ, ರಾಯಣ್ಣ ಬಗ್ಗೆ ಮಾತನಾಡುವ ರಾಷ್ಟ್ರೀಯ ಪಕ್ಷಗಳ ನಾಯಕರು ಏಕೆ ಮಹಾದಾಯಿ, ಕಾವೇರಿ ವಿಚಾರವಾಗಿ ಮಾತನಾಡುವುದಿಲ್ಲ. ಉತ್ತರ ಭಾರತೀಯ ನಾಯಕರಿಂದ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಯಾವುದೇ ಪ್ರಯೋಜನವಿಲ್ಲ. ದೇಶಕ್ಕೆ ಸಂವಿಧಾನ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಗೆ ಅವಮಾನ ಮಾಡಿದರೆ ಸಹಿಸುವುದಿಲ್ಲ ಎಂದರು.
ನಮ್ಮ ಪಕ್ಷದ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಕ್ಷೇತ್ರದ ಜನತೆ ಬುದ್ಧಿ ಕಲಿಸಿ ಮನೆಗೆ ಕಳಿಸ್ತಾರೆ, ಮತದಾರ ಪ್ರಜ್ಞಾವಂತನಾಗಿದ್ದು, ಯೋಗ್ಯ ವ್ಯಕ್ತಿಗಳಿಗೆ ಮತ ಹಾಕಿ ಅಧಿಕಾರ ನೋಡಲಿದ್ದಾರೆ. ಯೋಗ್ಯವಂತರು ಯಾರೇ ಬಂದರೂ ಪಕ್ಷಕ್ಕೆ ಮುಕ್ತವಾಗಿ ಆಹ್ವಾನ ನೀಡುತ್ತೇವೆ. 7 ಜನ ಬಂಡಾಯ ನಾಯಕರ ಬಗ್ಗೆ ಮಾತನಾಡುವುದರಿಂದ ಯಾವುದೇ ಪ್ರಯೋಜವಿಲ್ಲ, ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಸರ್ವೇ ಸಾಮಾನ್ಯ, ನಮ್ಮ ಪಕ್ಷಕ್ಕೂ ಅನೇಕ ಮುಖಂಡರು ಸೇರ್ಪಡೆಯಾಗಿದ್ದಾರೆ ಎಂದರು.
ಯುವ ಜನತೆಗೆ ಉದ್ಯೋಗ, ಆರ್ಥಿಕ ಶಕ್ತಿ ತುಂಬುವಲ್ಲಿ ರಾಷ್ಟ್ರೀಯ ಪಕ್ಷಗಳು ವಿಫಲವಾಗಿದ್ದು, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದ್ದು, ಪ್ರತಿ ವರ್ಷ 250 ಲಕ್ಷ ಕೃಷಿ, ಕೈಗಾರಿಕಾ ಹಾಗೂ ಗುಡಿಕೈಗಾರಿಕಾ ವಲಯದಲ್ಲಿ ಉದ್ಯೋಗ ಸೃಷ್ಠಿಸಲು ನಮ್ಮ ಪಕ್ಷ ಯೋಜನೆ ರೂಪಿಸಿದೆ. ಅರಣ್ಯ ಪ್ರದೇಶದಲ್ಲಿ ಸಸಿ ನೆಡುವುದರ ಜೊತೆಗೆ ಅವುಗಳನ್ನು ಪೋಷಿಸಲು, ಮೇಲುಸ್ತುವಾರಿ ನಡೆಸಲು ಕಾರ್ಯಕ್ರಮ ಜಾರಿ, ಯುವಕರು, ವಿದ್ಯಾರ್ಥಿಗಳಿಗೆ ವಿಶೇಷ ಯೋಜನೆ ರೂಪಿಸಿ ಕಡಿಮೆ ಬಡ್ಡಿಯಲ್ಲಿ ಸಾಲ ಯೋಜನೆ ಜಾರಿಗೆ ನಮ್ಮ ಪಕ್ಷ ಬದ್ಧವಿದೆ. ರಾಜ್ಯದ ಬಹುತೇಕ ಶಾಲಾ-ಕಾಲೇಜುಗಳಲ್ಲಿ ಸಿಬ್ಬಂದಿ ಇರಲಿ ಪ್ರಾಂಶುಪಾಲರು, ಮುಖ್ಯ ಶಿಕ್ಷಕರೇ ಇಲ್ಲ, ಗುಣಮಟ್ಟದ ಶಿಕ್ಷಣ ಎಲ್ಲಿಂದ ಸಾಧ್ಯ. ಹಾಗಾಗಿ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳ ಖಾಲಿ ಹುದ್ದೆ ಭರ್ತಿ ಹಾಗೂ ಗುತ್ತಿಗೆ, ಅತಿಥಿ ಶಿಕ್ಷಕರು, ಉಪನ್ಯಾಸಕರನ್ನು ಖಾಯಂಗೊಳಿಸಲು ಕಾನೂನು ತರಲು ಬದ್ಧವಿದ್ದೇವೆ ಎಂದರು.
ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅವಕಾಶವಿದ್ದರೂ ಹೆಚ್ಚು ಅನುದಾನ ನೀಡುವಲ್ಲಿ ಸರಕಾರ ವಿಫಲವಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗುವುದು. ಬಂಡವಾಳ ಹೂಡಿಕೆಗೆ ಒತ್ತು ನೀಡಲಾಗುವುದು.ಧರ್ಮ,ಜಾತಿ,ಪಂಥದ ಹೆಸರಿನಲ್ಲಿ ರಾಜಕಾರಣ ಮಾಡಲು ಹೊರಟಿರುವುದು ಒಳ್ಳೆಯ ಬೆಳವಣಿಗೆಯಲ್ಲ, ಅಧಿಕಾರಕ್ಕಾಗಿ ವಿಭಜನೆ ಮಾಡುವುದನ್ನು ಬಿಟ್ಟು ತಮಗೆ ನೀಡಿರುವ ಅಧಿಕಾರ ಬಳಸಿಕೊಂಡು ಕಾನೂನು ಜಾರಿಗೊಳಿಸಿ ಎಂದ ಮಧು ಬಂಗಾರಪ್ಪ, ವೀರಶೈವ-ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರದಲ್ಲಿ ನಮ್ಮ ಪಕ್ಷ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಖಚಿತ:ರಾಷ್ಟ್ರೀಯ ಪಕ್ಷಗಳಿಗೂ ಮೊದಲು ಚುನಾವಣೆ 50 ದಿನ ಇರುವಾಗಲೇ ಗೆಲ್ಲುವ ವಿಶ್ವಾಸದಲ್ಲಿಯೇ ರಾಜ್ಯದ 126 ಕ್ಷೇತ್ರಗಳಿಗೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇವೆ. ಜೊತೆಗೆ 20 ಕ್ಷೇತ್ರಗಳಲ್ಲಿ ಬಿಎಸ್‍ಪಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಮೊದಲ ಪಟ್ಟಿಯಲ್ಲಿರುವ ಶೇ.80ರಷ್ಟು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಸಿ.ಬಿ.ಸುರೇಶ್‍ಬಾಬು, ರಾಜ್ಯ ಯುವ ಘಟಕದ ಕಾರ್ಯಾಧ್ಯಕ್ಷ ಚಂದ್ರಶೇಖರ್, ಕೃಷ್ಣಪ್ಪ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಹೇಶ್ ಹಿರೇಹಳ್ಳಿ, ವಕ್ತಾರ ಮಧು ಇತರರಿದ್ದರು.







