ಶಕ್ತಿನಗರ: ಮತದಾರ ಪಟ್ಟಿಯಲ್ಲಿ ಅಳಿಯದ ಹೆಸರುಗಳು; ಸ್ಥಳೀಯರ ಆಕ್ರೋಶ

ಮಂಗಳೂರು, ಎ.8: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪದವು ಗ್ರಾಮದ ಶಕ್ತಿನಗರ ಎಂಬಲ್ಲಿನ ಸಂಜಯನಗರ ಪ್ರದೇಶದ ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ಅಳಿಸಲು ಮನವಿ ಮಾಡಿದರೂ ಕೂಡ ಅಧಿಕಾರಿಗಳು ಕೆಲವು ಹೆಸರನ್ನು ಅಳಿಸದೆ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ರವಿವಾರ ನಡೆದಿದೆ.
ರವಿವಾರ ಮಿಂಚಿನ ಮತದಾನ ಪ್ರಕ್ರಿಯೆ ಭರದಿಂದ ಸಾಗಿದ್ದು, ಈ ಮಧ್ಯೆ ಶಕ್ತಿನಗರ ಸಮೀಪದ ಸಂಜಯನಗರದ ಮತದಾರರ ಪಟ್ಟಿಯಲ್ಲಿ ಸ್ಥಳೀಯರಲ್ಲದ ಕೇರಳದ ಸುಮಾರು 260 ಮಂದಿಯ ಹೆಸರು ಸೇರ್ಪಡೆಗೊಂಡಿತ್ತು. ಈ ಪಟ್ಟಿಯಲ್ಲಿರುವ ಕೇರಳಿಗರ ಹೆಸರನ್ನು ಕೈ ಬಿಡಬೇಕು ಎಂದು ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದರು.
ರವಿವಾರ ಮಿಂಚಿನ ನೋಂದಣಿ ಸಂದರ್ಭ 260 ಮಂದಿಯ ಪೈಕಿ 79 ಇನ್ನೂ ಬಾಕಿಯುಳಿದಿರುವ ಬಗ್ಗೆ ಅಧಿಕಾರಿಗಳಲ್ಲಿ ಸ್ಥಳೀಯರು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ಸಕಾರಾತ್ಮಕವಾಗಿ ಉತ್ತರಿಸದ ಕಾರಣ ಅಧಿಕಾರಿಗಳು ಮತ್ತು ಸ್ಥಳೀಯರ ಮಧ್ಯೆ ಮಾತಿನ ಚಕಮಕಿ ನಡೆಯಿತು ಎಂದು ತಿಳಿದುಬಂದಿದೆ.
ಶಕ್ತಿನಗರದ ಸಂಜಯನಗರ ಮತದಾರರ ಪಟ್ಟಿಯಲ್ಲಿ ಸ್ಥಳೀಯರಲ್ಲದವರ ಹೆಸರು ನುಸುಳಿಕೊಂಡಿದೆ. ಅವರನ್ನು ಪಟ್ಟಿಯಿಂದ ಕೈ ಬಿಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದರು. ಇದೀಗ ರವಿವಾರ ಮತದಾರರ ಪಟ್ಟಿ ಪರಿಶೀಲನೆಯ ಸಂದರ್ಭ ಇನ್ನೂ ಹಲವರ ಹೆಸರು ಬಾಕಿಯಾಗಿರುವ ಬಗ್ಗೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.







