ತಾವು ಬಿಜೆಪಿ ಪರವೋ, ವಿರುದ್ಧವೋ ಎಂಬುದನ್ನು ಜೆಡಿಎಸ್ ನಾಯಕರು ಸ್ಪಷ್ಟಪಡಿಸಲಿ : ರಾಹುಲ್ ಗಾಂಧಿ
.jpg)
ಬೆಂಗಳೂರು, ಎ. 8: ಜಾತ್ಯತೀತ ಜನತಾ ದಳ(ಜೆಡಿಎಸ್) ನಾಗಪುರದವರು ನಿಯಂತ್ರಿಸುವ ಬಿಜೆಪಿ ಜತೆಗೋ ಅಥವಾ ದೇಶದ ಜಾತ್ಯತೀತ ತತ್ವದ ಜತೆಗೋ ಎಂಬುದನ್ನು ವಿಧಾನಸಭಾ ಚುನಾವಣೆಗೂ ಮೊದಲು ಸ್ಪಷ್ಟಪಡಿಸಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ರವಿವಾರ ಖಾಸಗಿ ಹೊಟೇಲ್‌ನಲ್ಲಿ ಪತ್ರಕರ್ತರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ರಾಹುಲ್ ಗಾಂಧಿ, ರಾಜ್ಯದಲ್ಲಿ ಜೆಡಿಎಸ್, ಬಿಜೆಪಿ ಪರವಾಗಿದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸುವ ಅಗತ್ಯವಿದೆ. ಜಾತ್ಯತೀತ ಪಕ್ಷ ಎನ್ನುವ ಜೆಡಿಎಸ್ ಜನತೆಗೆ ತನ್ನ ಸ್ಪಷ್ಟಣೆ ನೀಡಲಿ ಎಂದು ಸವಾಲು ಹಾಕಿದರು.
ಲಿಂಗಾಯತ ಪ್ರತ್ಯೇಕ ಧರ್ಮದ ನೆಪದಲ್ಲಿ ನಾವು ಯಾವುದೇ ಒಡೆಯುವ ಕೆಲಸ ಮಾಡಿಲ್ಲ. ಇದರಿಂದ ರಾಜಕೀಯ ಲಾಭ ಪಡೆಯುವ ಉದ್ದೇಶವೂ ನಮಗಿಲ್ಲ. ಈ ಬಾರಿಯ ಚುನಾವಣೆ ನಾಗಪುರದ ಆರೆಸೆಸ್ಸ್ ಮತ್ತು ಕಾಂಗ್ರೆಸ್ ನಡುವಿನ ಸೈದ್ಧಾಂತಿಕ ಸಂಘರ್ಷವಾಗಿದೆ ಎಂದು ವಿಶ್ಲೇಷಿಸಿದರು.
ಹನ್ನೇರಡನೆ ಶತಮಾನದ ಸಮಾಜ ಸುಧಾರಕ, ಶ್ರೇಷ್ಠ ವಚನಕಾರ ಬಸವಣ್ಣ ಸೇರಿದಂತೆ ಶರಣರು ಮತ್ತು ಸಂತರ ತತ್ವಗಳನ್ನು ಒಳಗೊಂಡ ಕರ್ನಾಟಕದ ಸಂಸ್ಕೃತಿ ಮತ್ತು ಸಮಾಜ ವಿಭಜಿಸುವ ನಾಗಪುರದ ಆರೆಸೆಸ್ಸ್ ಸಂಸ್ಕೃತಿ ವಿರುದ್ಧದ ಹೋರಾಟ ಎಂದು ಅವರು ನುಡಿದರು.
ಸ್ವಾಭಿಮಾನದ ಗೆಲುವು: ಈ ಬಾರಿಯ ಕರ್ನಾಟಕದ ಚುನಾವಣೆ ನಾಗಪುರದ ಆರೆಸೆಸ್ಸ್ ಮತ್ತು ಕರ್ನಾಟಕ ಸ್ವಾಭಿಮಾನಿ ತತ್ವದ ನಡುವಿನ ಯುದ್ಧ. ಈ ಸಮರದಲ್ಲಿ ಕಾಂಗ್ರೆಸ್ ತತ್ವ-ಸಿದ್ಧಾಂತಕ್ಕೆ ಜಯ ದೊರೆಯಲಿದೆ ಎಂದು ರಾಹುಲ್ ಗಾಂಧಿ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ವಿವಿಧ ಮಠಗಳಿಗೆ ಭೇಟಿ ಸಂದರ್ಭದಲ್ಲಿ ತಾನು ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ಧಾರ್ಮಿಕ ವಿಚಾರಗಳ ಬಗ್ಗೆಯಷ್ಟೆ ಚರ್ಚೆ ನಡೆಸಿದ್ದು, ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆಯೂ ಯಾವುದೇಈ ಸ್ವಾಮೀಜಿಗಳ ಜತೆ ತಾನು ಯಾವುದೇ ಚರ್ಚೆ ನಡೆಸಲಿಲ್ಲ ಎಂದರು.
ತಾನು ಮಠಗಳು, ದೇವಾಲಯಗಳಿಗೆ ಭೇಟಿ ನೀಡುವ ವಿಚಾರವನ್ನೆ ಮಾಧ್ಯಮಗಳು ದೊಡ್ಡದು ಮಾಡಿದ್ದು, ತಾನು ಮೊದಲಿನಿಂದಲೂ ಮಸೀದಿ, ಮಂದಿರ, ಚರ್ಚ್‌ಗಳಿಗೆ ಭೇಟಿ ನೀಡುತ್ತಿದ್ದೇನೆ. ಆದರೆ, ಈ ಬಾರಿ ಮಾಧ್ಯಮಗಳು ಅದನ್ನೆ ದೊಡ್ಡದ್ದು ಮಾಡಿದವು ಎಂದು ಹಾಸ್ಯದ ದಾಟಿಯಲ್ಲೇ ಹೇಳಿದರು.
‘ಬ್ರಿಟಿಷರ ಆಡಳಿತದಿಂದ ತೊಲಗಬೇಕಾದರೆ ಲಕ್ಷಾಂತರ ದಂಗೆಗಳು ಆಗಬೇಕು’ ಎಂದು ಮಹಾತ್ಮ ಗಾಂಧಿ ಹೇಳುತ್ತಿದ್ದರು ಎಂದು ಉಲ್ಲೇಖಿಸಿದ ರಾಹುಲ್ ಗಾಂಧಿ, ನರೇಂದ್ರ ಮೋದಿ ನೇತೃತ್ವದ ಸರಕಾರದ ದುರಾಡಳಿತ ಕೊನೆಗೊಳಿಸಲು ಇನ್ನೂ ಎಷ್ಟು ದಂಗೆಗಳಾಗಬೇಕೋ? ಎಂದು ಪ್ರಶ್ನಿಸಿದರು.
ಈಗಾಗಲೇ ದೇಶದಲ್ಲಿ ರೈತರು, ಆದಿವಾಸಿಗಳು ಮತ್ತು ದಲಿತರ ದಂಗೆಗಳು ಆಗುತ್ತಿವೆ. ಆದರೆ, ಪ್ರಧಾನಿ ಮೋದಿಯವರಿಗೆ ದೇಶದ ಆಡಳಿತದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ. ದೇಶದ ಜನಕ್ಕೆ ಮೋದಿ ನಿಜಬಣ್ಣ ಗೊತ್ತಾಗಿದೆ. ಆಡಳಿತ ಯಂತ್ರದ ಸ್ಟೇರಿಂಗ್ ಆರೆಸೆಸ್ಸ್ ಕೈಯಲ್ಲಿದೆ ಎಂದು ಟೀಕಿಸಿದರು.
ತೃತೀಯ ರಂಗ ಅಸಾಧ್ಯ: ದೇಶದಲ್ಲಿ ಕಾಂಗ್ರೆಸ್, ಬಿಜೆಪಿ ಹೊರತಾದ ತೃತೀಯರಂಗ ಮತ್ತೆ ಅಸ್ತಿತ್ವಕ್ಕೆ ಬರುವುದು ಕಷ್ಟ. ಇದೀಗ ಪ್ರಾದೇಶಿಕ ಪಕ್ಷಗಳು ವ್ಯಕ್ತಿಯ ಮೇಲೆ ನಿಂತಿವೆ. ಆ ಪಕ್ಷಗಳ ರಾಜಕಾರಣ ವ್ಯಕ್ತಿತ್ವದ ನಡೆಯುತ್ತಿವೆ. ಸಿದ್ದಾಂತದ ಮೇಲಲ್ಲ. ಕಾಂಗ್ರೆಸ್‌ನೊಂದಿಗೆ ಎಲ್ಲ ಜಾತ್ಯತೀತ ಪಕ್ಷಗಳು ಕೈಜೋಡಿಸಿದರೆ ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನೂರು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ನುಡಿದರು.
ಸಿಎಂ ಮಾತ್ರ ಸ್ಪರ್ಧೆ: ಸಿದ್ದರಾಮಯ್ಯ ಬಿಟ್ಟರೆ ಬೇರೆ ಯಾರೂ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಣೆ ನೀಡಿದ ರಾಹುಲ್ ಗಾಂಧಿ, ಇದೇ ವೇಳೆ ಅವರ ಸಮೀಪದಲ್ಲಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ನಾನು ಹೇಳಿದ್ದು ಸರಿಯೇ ಎಂದು ಪ್ರಶ್ನಿಸಿ ಖಚಿತಪಡಿಸಿದರು.
‘2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಪಕ್ಷಗಳ ಒಕ್ಕೂಟ ನರೇಂದ್ರ ಮೋದಿಯನ್ನು ಸೋಲಿಸುವುದು ನಿಶ್ಚಿತ. 2014ರ ಸೋಲಿನಿಂದ ನಾವು ಪಾಠ ಕಲಿತಿದ್ದು, ಈ ಹಿಂದೆ ಮಾಡಿದ ತಪ್ಪುಗಳನ್ನು ಮುಂದೆ ಆಗದಂತೆ ಎಚ್ಚರ ವಹಿಸುತ್ತೇವೆ’
-ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ







