ಆದಿತ್ಯನಾಥ್ ನಮ್ಮನ್ನು ಕಡೆಗಣಿಸುತ್ತಿದ್ದಾರೆ: ಬಿಜೆಪಿ ಮಿತ್ರಪಕ್ಷ ಎಸ್ ಬಿಎಸ್ ಪಿ ಆರೋಪ

ಲಕ್ನೋ, ಎ.8: ಉತ್ತರ ಪ್ರದೇಶ ಸರಕಾರವು ನಮ್ಮ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂಬ ಬಿಜೆಪಿ ಸಂಸದರ ದೂರುಗಳ ನಡುವೆಯೇ ಮುಖ್ಯಮಂತ್ರಿ ಆದಿತ್ಯನಾಥ್ ‘ಸಮ್ಮಿಶ್ರ ಧರ್ಮ’ವನ್ನು ಪಾಲಿಸುತ್ತಿಲ್ಲ ಹಾಗು ನಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಎನ್ ಡಿಎ ಮಿತ್ರಪಕ್ಷ ಎಸ್ ಬಿಎಸ್ ಪಿ ಆರೋಪಿಸಿದೆ.
“ಎಪ್ರಿಲ್ 10ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಲಕ್ನೋಗೆ ಆಗಮಿಸಿದಾಗ ನಾನು ಅವರೊಂದಿಗೆ ಹಲವು ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಿದ್ದೇನೆ. ನಂತರ ಪಕ್ಷದ ಕ್ರಮದ ಬಗ್ಗೆ ತಿಳಿಸಲಿದ್ದೇನೆ” ಎಸ್ ಬಿಎಸ್ ಪಿ ನಾಯಕ ಹಾಗು ಉತ್ತರ ಪ್ರದೇಶ ಸಚಿವ ಓಂ ಪ್ರಕಾಶ್ ರಾಜ್ ಭರ್ ಹೇಳಿದ್ದಾರೆ.
ಪಕ್ಷದ ಪ್ರಸ್ತಾಪಿಸುವ ಸಮಸ್ಯೆಯ ಬಗ್ಗೆ ಅಮಿತ್ ಶಾ ಸ್ಪಂದಿಸದೇ ಇದ್ದಲ್ಲಿ ಮೈತ್ರಿಯ ಬಗ್ಗೆ ಮರು ಆಲೋಚಿಸಲಾಗುವುದು ಎಂದವರು ಹೇಳಿದರು.
ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಶಾಸಕರು ಹಾಗು ಸಂಸದರು ಆದಿತ್ಯನಾಥ್ ಸರಕಾರದ ವಿರುದ್ಧ ಕೋಪಗೊಂಡಿರುವುದು ಯಾಕಾಗಿ?, ಅವರ ಸಮಸ್ಯೆಗಳನ್ನು ಹೇಳಿಕೊಳ್ಳಲು ದಿಲ್ಲಿಗೆ ಹೋಗುತ್ತಿರುವುದು ಯಾಕಾಗಿ?, ಶಾಸಕರು ಕೋಪಗೊಂಡಿರುವುದು ಯಾಕೆ ಹಾಗು ಅವರು ಪ್ರತಿಭಟನೆ ನಡೆಸುತ್ತಿರುವುದೇಕೆ” ಎಂದವರು ಪ್ರಶ್ನಿಸಿದರು
ಸೆಕಂಡರಿ ಶಿಕ್ಷಣ ಮಂಡಳಿಗೆ ಇತ್ತೀಚೆಗೆ ನಡೆದ ನೇಮಕಾತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, “ಬಿಜೆಪಿಯ ಸಬ್ ಕಾ ಸಾತ್, ಸಬ್ಕಾ ವಿಕಾಸ್’ ಕಾರ್ಯರೂಪಕ್ಕೆ ಬರುತ್ತಿಲ್ಲ. ಹಿರಿಯ ಬಿಜೆಪಿ ನಾಯಕರ ಸಂಬಂಧಿಕರನ್ನು ನೇಮಕ ಮಾಡಲಾಗಿದೆ. ಹಿಂದುಳಿದ ಹಾಗು ಪರಿಶಿಷ್ಟ ಜಾತಿಯ ಜನರು ಎಲ್ಲಿಗೆ ಹೋಗಬೇಕು?” ಎಂದವರು ಪ್ರಶ್ನಿಸಿದರು.







