ಉಡುಪಿ: ಪಿ.ಶಿವಾಜಿ ಶೆಟ್ಟಿ ಸ್ಮಾರಕ 3ನೇ ರಾ. ಅಣಕು ನ್ಯಾಯಾಲಯ ಸ್ಪರ್ಧೆ
ಬೆಂಗಳೂರು ಕಾಲೇಜು ಚಾಂಪಿಯನ್, ಮಂಗಳೂರು ರನ್ನರ್‌ಅಪ್

ಉಡುಪಿ, ಎ.8: ಕುಂಜಿಬೆಟ್ಟಿನ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ನ್ಯಾಯವಾದಿ ಪಿ.ಶಿವಾಜಿ ಶೆಟ್ಟಿ ಸ್ಮಾರಕ ಮೂರನೆಯ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾನೂನು ಕಾಲೇಜು ತಂಡ ಪ್ರಥಮ ಸ್ಥಾನ ಪಡೆಯುವ ಮೂಲಕ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದರೆ, ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜು ತಂಡ ಎರಡನೇ ಸ್ಥಾನ ಪಡೆಯುವ ಮೂಲಕ ರನ್ನರ್‌ಅಪ್ ಪ್ರಶಸ್ತಿ ಗೆದ್ದುಕೊಂಡಿತು.
ರವಿವಾರ ಸಂಜೆ ನಡೆದ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಕೇರಳ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಮೂ. ದೇವನ್ ರಾಮಚಂದ್ರನ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಅಣಕು ನ್ಯಾಯಾಲಯದಲ್ಲಿ ನ್ಯಾಯವಾದಿಗಳ ಪರೀಕ್ಷೆ ನಡೆಯುತ್ತದೆ. ನಿಜವಾದ ನ್ಯಾಯಾಲಯದಲ್ಲಿ ಪ್ರಕರಣದ ಪರೀಕ್ಷೆ ನಡೆಯುತ್ತದೆ. ಇಂತಹ ಪ್ರಾಯೋಗಿಕ ಅನುಭವಗಳು ವೃತ್ತಿಜೀವನದ ಯಶಸ್ಸಿಗೆ ಕಾರಣ ರಾಗುತ್ತವೆ ಎಂದವರು ನುಡಿದರು.
ಕಾನೂನು ವೃತ್ತಿ ಸುಲಭದ್ದಲ್ಲ. ಪ್ರತಿನಿತ್ಯ ಹೊಸತನ, ಹೊಸ ಅನುಭವ ಸಿಗುತ್ತವೆ. ಕಠಿಣ ಸವಾಲುಗಳು ಇದಿರಾಗುತ್ತವೆ. ಇದರಲ್ಲಿ ಯಶಸ್ಸು ಗಳಿಸಲು ಅಡ್ಡ ಮಾರ್ಗಗಳು ಇಲ್ಲ. ಕಠಿನ ಪರಿಶ್ರಮವೊಂದೇ ಯಶಸ್ಸಿಗೆ ದಾರಿ ಎಂದು ದೇವನ್ ರಾುಚಂದ್ರನ್ ಕಿವಿಮಾತು ಹೇಳಿದರು.
ಗೌರವ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಹಾಗೂ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣದ ನ್ಯಾಯಾಂಗ ಸದಸ್ಯ ನ್ಯಾ. ಎ.ವಿ.ಚಂದ್ರಶೇಖರ್ ಮಾತನಾಡಿ, ಟ್ರಾಯಲ್ ಅಡ್ವಕೆಸಿಯನ್ನು ನಡೆಸುವುದು ಉತ್ತಮಎಂದು ಸಂಘಟಕರಿಗೆ ಸಲಹೆ ನೀಡಿದರು.
ಮಂಗಳೂರಿನ ಹಿರಿಯ ನ್ಯಾಯವಾದಿ ಎಂ.ವಿ.ಶಂಕರ ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ.ಪ್ರಕಾಶ ಕಣಿವೆ ಸ್ವಾಗತಿಸಿ, ಆಯೆಶಾ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಸ್ಪರ್ಧೆಯ ಸಂಯೋಜಕಿ ಡಾ.ನಿರ್ಮಲಾ ಕುಮಾರಿ ವಿಜೇತರ ಪಟ್ಟಿ ವಾಚಿಸಿದರು. ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆನಂದ ಮಡಿವಾಳ, ಸ್ಪರ್ಧೆಯ ಪ್ರಾಯೋಜಕಿ ಜಯಂತಿ ಶಿವಾಜಿ ಶೆಟ್ಟಿ ಉಪಸ್ಥಿತರಿದ್ದರು.







